Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ವೀಡಿಯೋ ಮಾಡಿ ಮಹಿಳೆಯರನ್ನು ಜೀವಂತವಾಗಿ ಕೊಲೆ ಮಾಡಿದ್ದಾರೆ. ಇಷ್ಟೆಲ್ಲಾ ನಡೆದ್ರೂ ಬಿಜೆಪಿಯವರು ಬಾಯಿಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.

ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ, ಪ್ರಜ್ವಲ್ ರೇವಣ್ಣ ವಿಕೃತ ಕಾಮಿ ಎಂದು ಗೊತ್ತಿದ್ದರೂ ಸಹ ಬಿಜೆಪಿಯವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇಡೀ ರಾಜ್ಯ, ದೇಶ, ವಿಶ್ವವೇ ತಲೆತಗ್ಗಿಸುವ ಈ ಘಟನೆಯ ಬಗ್ಗೆ ಬಿಜೆಪಿಯವರ ನಿಲುವು ಸ್ಪಷ್ಟಪಡಿಸಬೇಕು. ಹುಬ್ಬಳ್ಳಿಯಲ್ಲಿ ಹೋರಾಟ ಮಾಡಿದವರಿಗೆ ಈ ನೂರಾರು ಮಹಿಳೆಯರ ನೋವಿನ ಕೂಗು ಏಕೆ ಕೇಳುತ್ತಿಲ್ಲ? ಏಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ರೇವಣ್ಣ ಅವರ ವೀಡಿಯೋ ತುಣುಕುಗಳು ಹರಿದಾಡುತ್ತಿವೆ. ಇಡೀ ರಾಜ್ಯ ತಲೆ ತಗ್ಗಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಮುಂಚೆಯೇ ಹಾಸನದ ಬಿಜೆಪಿ ನಾಯಕ ದೇವರಾಜ ಗೌಡ ಅವರು ತಿಳಿಸಿದ್ದರು. ಅವರು ಈ ರೀತಿ ಇದ್ದಾರೆ. ಮೈತ್ರಿ ಮಾಡಿಕೊಳ್ಳುವುದು ಬೇಡ, ಅವರಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ ತಿಳಿಸಿದ್ದರು. ಇದೆಲ್ಲಾ ಬಿಜೆಪಿಯವರಿಗೆ ಮುಂಚೆಯೇ ಗೊತ್ತಿದ್ದರೂ ಕೂಡ ತಮ್ಮ ರಾಜಕೀಯ ಲಾಭಕ್ಕಾಗಿ, ಬೇಟಿ ಬಚಾವ್-ಬೇಟಿ ಪಡಾವ್, ನಾರಿ ಶಕ್ತಿ ಎನ್ನುವ ಬಿಜೆಪಿ ನಾಯಕರು ಮೈತ್ರಿ ಮಾಡಿಕೊಂಡರು ಎಂದು ಅವರು ಕಿಡಿಕಾರಿದ್ದಾರೆ.

ಮೈಸೂರಿಗೆ ಅಮಿತ್ ಷಾ ಬಂದ ವೇಳೆ ಹಾಸನದ ಮಾಜಿ ಶಾಸಕ ಪ್ರೀತಂಗೌಡ, ಎ.ಟಿ ರಾಮಸ್ವಾಮಿಯವರು ಖುದ್ದಾಗಿ ಅವರನ್ನು ಭೇಟಿಯಾಗಿ, ಈ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ಅಮಿತ್ ಷಾ ಅವರಿಗೂ ಪ್ರಜ್ವಲ್ ರೇವಣ್ಣ ಅವರ ಕರ್ಮಕಾಂಡ ಮುಂಚೆಯೇ ಗೊತ್ತಿತ್ತು. ಇಷ್ಟೆಲ್ಲಾ ಆದರೂ ಬಿಜೆಪಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ವಿಚಾರದಲ್ಲಿ, ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದರೆ, ಅದನ್ನು ಅವರ ಪಕ್ಷ ನೋಡಿಕೊಳ್ಳುತ್ತದೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಹುಬ್ಬಳ್ಳಿ ಘಟನೆಗೆ ತೋರಿಸಿದಷ್ಟು ಆಸಕ್ತಿಯನ್ನು ಜಗದೀಶ್ ಶೆಟ್ಟರ್ ಏಕೆ ತೋರುತ್ತಿಲ್ಲ? ನನ್ನ ಬಗ್ಗೆ ಮಾತನಾಡಿದ ಸಂಜಯ್ ಪಾಟೀಲ್ ಈ ಘಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಉಡುಪಿಯಯಲ್ಲಿ ನಡೆದ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ  ಬಂದಿತ್ತು. ಈಗ 2000 ವೀಡಿಯೋಗಳು ಹರದಾಡುತ್ತಿದ್ದರೂ ಅವರೆಲ್ಲಾ ಎಲ್ಲಿದ್ದಾರೆ? ನೀವು, ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿಲ್ಲ ಎಂದಾದರೆ ಇಂಟರ್ ಪೋಲ್ ಸಹಾಯ ಪಡೆದು ಹೊರಗಿನಿಂದ ಕರೆಸಲಿ. ನಮಗೆ ವಿಷಯ ಗೊತ್ತಾದ ತಕ್ಷಣ ಎಸ್‍ಐಟಿ ರಚನೆ ಮಾಡಿದ್ದೇವೆ. ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದೇವೆ. ನ್ಯಾಯ ಕೊಡಿಸುವ ಜವಾಬ್ದಾರಿಯನ್ನು ನಾವು ಹೊತ್ತುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!