Spread the love

ಸಂಯುಕ್ತ ಟೈಮ್ಸ್, ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ 400 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. ಈ ಗುರಿಯು ಕೇವಲ ಘೋಷಣೆಯಾಗಿಲ್ಲ, ವಾಸ್ತವದಲ್ಲೂ ಇದು ನಿಜವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮಹಿಳೆಯರು, ಯುವಜನರು ಮತ್ತು ಮೊದಲ ಬಾರಿಗೆ ಮತ ಚಲಾಯಿಸುವ ಮತದಾರರು (Voters) ನಿರ್ಣಾಯಕವಾಗಿ ಮತ್ತು ಧನಾತ್ಮಕವಾಗಿ ಮತದಾನ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ನಾನು ಮತದಾನದ ಕೇಂದ್ರದಲ್ಲಿ ಇಲ್ಲ, 140 ಕೋಟಿ ಜನರು ಅಲ್ಲಿದ್ದಾರೆ. ಮೊದಲ ಮೂರು ಹಂತಗಳಲ್ಲಿನ ಮತದಾನದಲ್ಲಿ ʻ400 ಪಾರ್ʼ ಎಂಬುದು ಕೇವಲ ಘೋಷಣೆಯಾಗಿರದೇ ವಾಸ್ತವವಾಗುತ್ತಿರುವುದನ್ನು ಸ್ಪಷ್ಟವಾಗಿ ನೋಡುತ್ತಿದ್ದೇನೆ. ಎನ್‌ಡಿಎಯಂತಹ (NDA Alliance) ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡಲು ಜನರು ಬದ್ಧರಾಗಿದ್ದಾರೆ. ದೇಶದ ಭವಿಷ್ಯ ಭದ್ರಪಡಿಸಲು ಜನರು ಬಿಸಿಗಾಳಿಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್‌ಡಿಎ 400 ಸೀಟುಗಳನ್ನು ಗೆಲ್ಲುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು, ಅವರ ಮಹಾ ನಾಯಕರು ರಾಜ್ಯಸಭೆಗೆ ಹೋಗಿದ್ದಾರೆ, ಅವರ 2ನೇ ನಾಯಕ 2ನೇ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ ಎಂದು ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆ ಮತ್ತು ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸದ ಉದಾಹರಣೆಗಳನ್ನು ಉಲ್ಲೇಖಿಸಿದರು. ಅವರಿಗೆ ಜನರ ಸೇವೆಯಲ್ಲಿ ಆಸಕ್ತಿ ಇಲ್ಲ, ಅವರು ತಮ್ಮ ಕುಟುಂಬದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾರೆ ಮತ್ತು ದೇಶದ ಬಗ್ಗೆ ಯೋಚಿಸುವುದಿಲ್ಲ ಎಂದು ಅವರು ಕುಟುಕಿದರು.

ಕಳೆದ 10 ವರ್ಷಗಳಲ್ಲಿ ಅವರು ಪ್ರಧಾನಿಯಾಗಿ ವಿಫಲರಾಗಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಮೋದಿ, ಪ್ರತಿಪಕ್ಷಗಳು ಚಾಯ್ವಾಲಾ ಮಗನನ್ನು ಪ್ರಧಾನಿಯಾಗಿ ನೋಡಲು ಸಾಧ್ಯವಿಲ್ಲ. ನಾನು 3ನೇ ಬಾರಿಗೆ ಗೆದ್ದರೆ ನಾನು ಅವರ ದಾಖಲೆಯನ್ನು ಮರೆಮಾಡುತ್ತೇನೆ ಎಂದು ಅವರು ಭಯಪಡುತ್ತಿದ್ದಾರೆ ಎಂದು ಹೇಳಿದರು.

ತಮ್ಮ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ಇಂದು ದೇಶದಲ್ಲಿ 1.5-2.5 ಲಕ್ಷ ಸ್ಟಾರ್ಟ್‌ಅಪ್‌ಗಳಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿವೆ. ಲಕ್ಷಗಟ್ಟಲೆ ಉದ್ಯೋಗಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. 1 ಸ್ಟಾರ್ಟಪ್ ಆರಂಭಿಸಲು ಸರಾಸರಿ 4-5 ಜನರಿಗೆ ಉದ್ಯೋಗ ಸಿಗುತ್ತದೆ. ಮುದ್ರಾ ಯೋಜನೆಯಡಿ ಸುಮಾರು 28 ಲಕ್ಷ ಕೋಟಿ ಫಲಾನುಭವಿಗಳಿಗೆ ಸಾಲ ನೀಡಲಾಗಿದೆ. ನಾವು ಈಗ 3 ಕೋಟಿ ಮಹಿಳೆಯರನ್ನ ಲಕ್‌ಪತಿ ದೀದಿಯರನ್ನಾಗಿ ಮಾಡಲು ಯೋಜಿಸುತ್ತಿದ್ದೇವೆ. 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ ಎಂದು ಸಾಧನೆಗಳನ್ನು ಹೇಳಿದರು.

ಹಿಂದಿನದ್ದಕ್ಕೆ ಹೋಲಿಸಿದ್ರೆ ದುಪ್ಪಟ್ಟು ಹೆದ್ದಾರಿಗಳು ಮತ್ತು ರೈಲು ಮಾರ್ಗಗಳು ನಿರ್ಮಾಣವಾಗಿವೆ. ಆದರೂ ಅವರು ಸುಳ್ಳುಗಳನ್ನೇ ಹರಡುತ್ತಿದ್ದಾರೆ. ವಾಸ್ತವವಾಗಿ, ಅವರು ರಾಜಕೀಯವಾಗಿ ನಿರುದ್ಯೋಗಿಗಳಾಗಿದ್ದಾರೆ. ಇಂದು, ಎಲ್‌ಇಡಿ ಬಲ್ಬ್‌ಗಳ ಕ್ರಾಂತಿಯಿಂದಾಗಿ ವಿದ್ಯುತ್ ಬಿಲ್‌ಗಳಲ್ಲಿನ ಸರಾಸರಿ ಒಟ್ಟು ಮೊತ್ತವು ಕಡಿಮೆಯಾಗಿದೆ. 5 ಲಕ್ಷ ಜನರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. 80 ಕೋಟಿ ಜನರು ಉಚಿತ ಪಡಿತರವನ್ನು ಪಡೆದಿದ್ದಾರೆ ಎಂದು ಅವರು ತಿಳಿಸಿದರು.

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ಅನ್ನು ಕಟುವಾಗಿ ಟೀಕಿಸಿದ ಮೋದಿ, ಕಾಂಗ್ರೆಸ್‌ ಪಕ್ಷವು ತನ್ನ ಮತ ಬ್ಯಾಂಕ್‌ಗಾಗಿ ಯಾವುದೇ ಹಂತಕ್ಕೆ ಇಳಿಯಬಹುದು. ತೀರ್ಪು ಬಂದಾಗಿನಿಂದ ರಾಮ ಮಂದಿರದ ಬಗ್ಗೆ ಕಾಂಗ್ರೆಸ್‌ನ ನಿರೂಪಣೆ ಸ್ಪಷ್ಟವಾಗಿದೆ ಅವರು ರಾಮಲಲ್ಲಾನ ಮತ್ತೆ ಟೆಂಟ್‌ಗೆ ಕಳುಹಿಸಲು ಬಯಸುತ್ತಿದ್ದಾರೆ. ಅವರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಈ ಎಲ್ಲ ಕೆಲಸಗಳನ್ನು ಮಾಡುತ್ತಾರೆ ಎನ್ನುವುದು ನನಗೆ ಆಶ್ಚರ್ಯ ತಂದಿದೆ ಎಂದರು.

ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಕೋಟಾವನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಬದ್ಧವಾಗಿದೆಯೇ ಹೊರತು ಧರ್ಮದ ಆಧಾರದ ಮೇಲೆ ಅಲ್ಲ ಎಂದು ಅವರು ಹೇಳಿದರು. ಧರ್ಮಾಧಾರಿತ ಮೀಸಲಾತಿಗೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ, ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಕೋಟಾ ನೀಡಬೇಕೆಂದು ಕರೆ ನೀಡಿತು, ಅದಕ್ಕೆ ನಾವು ಬದ್ಧರಾಗಿದ್ದೇವೆ, ನಾವು ಸಂವಿಧಾನ ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You missed

error: Content is protected !!