ಸಂಯುಕ್ತ ಟೈಮ್ಸ್, ನವದೆಹಲಿ: ಇದೇ ಜೂ.9 ರಂದು ಸಂಜೆ 7:15 ಕ್ಕೆ 3ನೇ ಬಾರಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆ ಮೂಲಕ ತಿಳಿಸಿದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭ ಕುರಿತು ರಾಷ್ಟ್ರಪತಿ ಭವನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ರಾಷ್ಟ್ರಪತಿ ಭವನದಲ್ಲಿ ಸಮಾರಂಭ ನಡೆಯಲಿದೆ.
ಪ್ರಧಾನ ಮಂತ್ರಿ ಹಾಗೂ ಮಂತ್ರಿ ಮಂಡಲದ ಇತರ ಸದಸ್ಯರಿಗೆ ಜೂ.9 ರಂದು ಸಂಜೆ 7:15ಕ್ಕೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳು ಪ್ರಮಾಣವಚನ ಹಾಗೂ ಗೌಪ್ಯತಾ ವಿಧಿ ಬೋಧಿಸಲಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಎನ್ಡಿಎ ನಾಯಕನಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಈ ವೇಳೆ ಎನ್ಡಿಎ ಮಿತ್ರಪಕ್ಷಗಳ ನಾಯಕರು ಸಹ ಮೋದಿಗೆ ಸಾಥ್ ನೀಡಿದ್ದರು.

