Spread the love

ಬೆಂಗಳೂರು : ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿದ್ದಾರೆಂಬ ದೂರಿನ ಮೇಲೆ ಸೋಮವಾರ ಬೆಳಿಗ್ಗೆಯೇ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತ ಪೊಲೀಸರು, 17 ಅಧಿಕಾರಿಗಳು ಹೊಂದಿರುವ ಅಪಾರ ಪ್ರಮಾಣದ ಚಿನ್ನಾಭರಣ, ನಗದು ಹಾಗೂ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 69 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಶುರುವಿಟ್ಟ ಲೋಕಾಯುಕ್ತ ಪೊಲೀಸರಿಗೆ ಭಾರಿ ಅಚ್ಚರಿಯೇ ಕಾದಿತ್ತು. ದೊಡ್ಡ ಮೊತ್ತದ ನಗದು ವಶವಾದ ಮಾಹಿತಿ ಇಲ್ಲವಾದರೂ ಕೆಲವು ಅಧಿಕಾರಿಗಳು ಏಳೆಂಟು ನಿವೇಶನ, ಐಷಾರಾಮಿ ತೋಟದ ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ.

ಬೆಳಿಗ್ಗೆಯಿಂದ ಶುರುವಾದ ಶೋಧ ಕಾರ್ಯ ಸಂಜೆಯವರೆಗೂ ಮುಂದುವರಿದಿತ್ತು. ಕೆಲವು ಅಧಿಕಾರಿಗಳು ತಮ್ಮ ಆದಾಯಕ್ಕಿಂತ ಶೇ 60ರಷ್ಟು ಹೆಚ್ಚಿನ ಆಸ್ತಿ ಹೊಂದಿದ್ದರೆ, ಲಾಭಕಟ್ಟಿನ ಹುದ್ದೆಯಲ್ಲಿರುವ ಕೆಲವು ಅಧಿಕಾರಿಗಳ ಅಕ್ರಮ ಆಸ್ತಿಯ ಪ್ರಮಾಣ ಶೇ 322ಕ್ಕಿಂತ ಹೆಚ್ಚಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ಅರಣ್ಯ, ಸಮಾಜ ಕಲ್ಯಾಣ, ವಾಣಿಜ್ಯ ತೆರಿಗೆ, ನಗರ ಯೋಜನೆ, ಕೈಗಾರಿಕೆ, ಕೆಪಿಟಿಸಿಎಲ್ ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತದಾಳಿ ನಡೆದಿದೆ.

ಶೋಧದ ವೇಳೆ, 17 ಅಧಿಕಾರಿಗಳು ಒಟ್ಟು 137 ಕೋಟಿ ಮೌಲ್ಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಬಗ್ಗೆ ದಾಖಲೆ ಲಭ್ಯವಾಗಿದೆ ಎಂದು ಲೋಕಾಯುಕ್ತ ಮೂಲಗಳು ಹೇಳಿವೆ. ದಾಳಿಯಲ್ಲಿ 114 ಲಕ್ಷಕ್ಕೂ ಹೆಚ್ಚು ನಗದು ವಶಕ್ಕೆ ಪಡೆಯಲಾಗಿದೆ. ಸಹಾಯಕ ಎಂಜಿನಿಯರ್‌ ನಾಗೇಂದ್ರಪ್ಪ ಮನೆಯಲ್ಲಿ 1.30 ಕೆ.ಜಿ ಚಿನ್ನ ದೊರೆತಿದೆ.

Leave a Reply

Your email address will not be published. Required fields are marked *

You missed

error: Content is protected !!