ಸಂಯುಕ್ತ ಟೈಮ್ಸ್, ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ನಿಗಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಿಸುವಂತೆ ಆದೇಶ ಹೊರಡಿಸಿದೆ.

ಸಾರ್ವಜನಿಕ ಉದ್ದಿಮೆಗಳು, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳು ಮತ್ತು ಅರೆ ಸ್ವಾಯತ್ತ ಸಂಸ್ಥೆಗಳ ಹಣಕಾಸಿನ ವಹಿವಾಟಿನ ಮೇಲೆ ಬಹುಹಂತದ ನಿಗಾ ಇರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸುತ್ತೋಲೆ ಹೊರಡಿಸಿದ್ದಾರೆ.
ಚಾಲ್ತಿ ಖಾತೆ, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಸೇರಿದಂತೆ ಎಲ್ಲ ಬ್ಯಾಂಕ್ ಖಾತೆಗಳ ಆರಂಭಿಕ ಮತ್ತು ಅಂತ್ಯದ ಶಿಲ್ಕಿನ ಕುರಿತು ಪ್ರತಿ ತಿಂಗಳು ಸಮಗ್ರ ಪರಿಶೀಲನೆ ನಡೆಸಬೇಕು. ನಿಶ್ಚಿತ ಠೇವಣಿಯ ಮೊತ್ತ, ಅವಧಿ ಪೂರ್ಣಗೊಳ್ಳುವುದು (ಮೆಚ್ಯುರಿಟಿ), ಬಡ್ಡಿ ಪಾವತಿ ಬಗ್ಗೆಯೂ ನಿಗಾ ಇರಿಸಬೇಕು. ಈ ಎಲ್ಲ ಸಂಸ್ಥೆಗಳ ಹಣಕಾಸಿನ ವಹಿವಾಟಿನ ಕುರಿತು ಮೂರನೇ ವ್ಯಕ್ತಿಗಳಿಂದ ತಪಾಸಣೆ ಮಾಡಿಸಬೇಕು. ಆಂತರಿಕ ಲೆಕ್ಕಪರಿಶೋಧಕರಿಂದ ಈ ಬಗ್ಗೆ ವರದಿ ಪಡೆದು ಸಂಸ್ಥೆಗಳ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಬೇಕು. ಆಯಾ ಸಂಸ್ಥೆಗಳ ಹಣಕಾಸು ವ್ಯವಹಾರಗಳ ಕುರಿತು ಬ್ಯಾಂಕ್ಗಳಿಂದ ದಾಖಲೆಗಳನ್ನು ಪಡೆದು, ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಹೊರ ಊರುಗಳಲ್ಲಿ ಹೂಡಿಕೆ ನಿರ್ಬಂಧ: ಯಾವುದೇ ಸಂಸ್ಥೆಗಳು ತಮ್ಮ ಕೇಂದ್ರ ಸ್ಥಾನದ ನಗರದಿಂದ ಹೊರಗಿರುವ ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡುವಂತಿಲ್ಲ. ಹೂಡಿಕೆಯ ಮೊತ್ತವನ್ನು ಆಯಾ ಸಂಸ್ಥೆಗಳ ಹೆಸರಿನಲ್ಲೇ ತೆರೆದ ಖಾತೆಗಳಿಗೆ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಆರ್ಟಿಜಿಎಸ್ ಮೂಲಕ ಮಾತ್ರ ವರ್ಗಾಯಿಸಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ.

