ಸಂಯುಕ್ತ ಟೈಮ್ಸ್, ಬೆಳಗಾವಿ: ಸುವರ್ಣ ಸೌಧದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಪ್ರಥಮ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಚಿಕ್ಕೋಡಿಯಲ್ಲಿ ನಿರ್ಮಾಣವಾದಂತಹ ತಾಯಿ ಮಕ್ಕಳ ಆಸ್ಪತ್ರೆಯನ್ನು ಬರುವ ಆಗಸ್ಟ್ 15 ರಂದು ಲೊಕಾರ್ಪಣೆಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಒದಗಿಸಲಾಗಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಕೂಡಲೇ ಸಾರ್ವಜನಿಕ ಬಳಕೆಗೆ ಒದಗಿಸಬೇಕು.
ರಾಜ್ಯಾದ್ಯಂತ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದ್ದು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕು. ಜಿಲ್ಲೆಯ ಎಲ್ಲ ಆಸ್ಪತ್ರಗಳಿಗೆ ಡೆಂಗ್ಯೂ ಪರೀಕ್ಷಾ ಕಿಟ್ ಗಳನ್ನು ವಿತರಿಸಬೇಕು. ಅಲ್ಲದೇ ಡೆಂಗ್ಯೂ ಜ್ವರದಿಂದ ಬಳಲುವ ರೋಗಿಗಳಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸುವದರ ಜೊತೆಗೆ ಡೆಂಗ್ಯೂ ಜ್ವರಕ್ಕೆ ಬೇಕಾಗುವಂತಹ ಅಗತ್ಯದ ಔಷಧಿ ಮತ್ತು ಪರಿಕರಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು.
ಡೆಂಗ್ಯೂ ಜ್ವರದ ಲಕ್ಷಣಗಳು, ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಮುಂದಾಗುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಶಾಲೆಗಳ ಡೆಸ್ಕ್ ಗಳ ಖರೀದಿಗೆ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯಾದ್ಯಂತ ಅಗತ್ಯವಿರುವ ಶಾಲೆಗಳಿಗೆ ಡೆಸ್ಕ್ ಗಳನ್ನು ಒದಗಿಸಬೇಕು.
ಶೈಕ್ಷಣಿಕ ಪ್ರಗತಿಗಾಗಿ ಶೀಘ್ರವೇ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರನ್ನು ನೇಮಿಸಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಆಗದಂತೆ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಂತಹ ರೈತ ಕುಟುಂಬಗಳಿಗೆ ಶೀಘ್ರವೇ ಪರಿಹಾರ ಒದಗಿಸಬೇಕು.
ಜಿಲ್ಲೆಯಲ್ಲಿ ಕೈಗೊಳ್ಳಲಾದ ಜಲ ಜೀವನ ಮಿಷನ ಯೋಜನೆಯಡಿ ಅಪೂರ್ಣ ಕಾಮಗಾರಿ ಹಾಗೂ ಸಮರ್ಪಕ ನೀರು ಪೂರೈಕೆ ಆಗುತ್ತಿರುವ ಕುರಿತು ಪರಿಶೀಲಿಸಲು ತಿಳಿಸಲಾಯಿತು.
ಬೆಳಗಾವಿ ಜಿಲ್ಲೆಯಾದ್ಯಂತ ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಬೇಕಾದಂತಹ ಜಾಗೆಯನ್ನು ಪಡೆದುಕೊಳ್ಳಲು ಅಗತ್ಯ ಕ್ರಮಗಳನ್ನು ಶೀಘ್ರವೆ ಪೂರ್ಣಗೊಳಿಸಬೇಕು. ರೈತರಿಗೆ ಅನಾನೂಕುಲ ಆಗದಂತೆ ದುರಸ್ತಿಗೊಳಪಟ್ಟ ವಿದ್ಯುತ್ ಪರಿವರ್ತಕಗಳನ್ನು ಶೀಘ್ರವೆ ಬದಲಾಯಿಸಲು ಕ್ರಮವಹಿಸಬೇಕು.
ರಾಯಬಾಗ ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈ ಸಂಬಂಧ ಸ್ಥಳೀಯ ಶಾಸಕರ ಜೊತೆಗೆ ನಿರಂತರ ಸಮನ್ವಯ ಸಾಧಿಸುವ ಮೂಲಕ ಆದಷ್ಟು ಶೀಘ್ರವೇ ಪೂರ್ಣಗೊಳಿಸಬೇಕು. ಈ ಕುರಿತು ರಾಯಬಾಗದಲ್ಲಿ ಶೀಘ್ರವೇ ಸಭೆ ಜರುಗಿಸಲಾಗುವದು ಎಂದು ಹೇಳಿದರು.
ನೆರೆಯ ಮಹರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ನದಿ ಪಾತ್ರದ ಗ್ರಾಮಗಳಲ್ಲಿ ಎದುರಾಗಬಹುದಾದ ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ಕುರಿತು ಸಾರ್ವಜನಿಕರಲ್ಲಿ ಮುಂಜಾಗೃತಾ ಕ್ರಮವಾಗಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ , ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್,ಜಿ. ಪಂ. ಸಿಇಓ ರಾಹುಲ ಶಿಂಧೆ, ಶಾಸಕರುಗಳಾದ ರಾಜು ಕಾಗೆ, ಆಸೀಫ್ ಸೇಠ್, ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ, ಬಾಬಾಸಾಹೇಬ ಪಾಟೀಲ, ಚನ್ನರಾಜ ಹಟ್ಟಿಹೊಳಿ, ನಾಗರಾಜ ಯಾದವ, ವಿಠ್ಠಲ ಹಲಗೇಕರ, ನಗರ ಪೊಲಿಸ್ ಆಯುಕ್ತ ಯಡಾ ಮಾರ್ಟಿನ ಮಾರ್ನಬ್ಯಾಂಗ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ನಾಮ ನಿರ್ದೆಶನ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

