Spread the love

ಸಂಯುಕ್ತ ಟೈಮ್ಸ್, ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಗ್ಯಾಂಗ್ ವಿರುದ್ಧ 4800 ಪುಟಗಳ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆ ಮಾಡಿದ್ದಾರೆ.

ಬೆಂಗಳೂರು ಪೊಲೀಸರು 24ನೇ ಎಸಿಎಂಎಂ ಕೋರ್ಟ್‌ಗೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ 4 ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆಂದು ತಿಳಿದುಬಂದಿದೆ.

ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಅವರನ್ನು 2ನೇ ಆರೋಪಿ ಎಂದೇ ದಾಖಲಿಸಲಾಗಿದ್ದು, ಪವಿತ್ರಾ 1ನೇ ಆರೋಪಿಯಾಗಿದ್ದಾರೆಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

17 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದ್ದು, 3 ಪ್ರತ್ಯಕ್ಷ ಸಾಕ್ಷಿಗಳು, ಎಫ್​ಎಸ್​ಎಲ್​ ಮತ್ತು ಸಿಎಫ್​ಎಸ್​ಎಲ್​ನಿಂದ 8 ವರದಿಗಳಿರುವುದು, ಈ ಪ್ರಕರಣದಲ್ಲಿ ಒಟ್ಟು 231 ಸಾಕ್ಷಿಗಳಿರುವುದಾಗಿ ತಿಳಿಸಲಾಗಿದೆ.

ಪ್ರಕರಣ ತನಿಖೆ ಪೂರ್ಣಗೊಂಡಿಲ್ಲದಿರುವುದರಿಂದ ಸಿಆರ್​ಪಿಸಿ 173(8) ಅಡಿಯಲ್ಲಿ ಪ್ರಿಲಿಮಿನರಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಅಪಹರಣ ಹಾಗೂ ಹಲ್ಲೆ ಮಾಡಿಸಿದ್ದು, ಕೊಲೆ ನಂತರ ಪ್ರಕರಣ ಮುಚ್ಚಿಹಾಕಲು ಹಣ ನೀಡಿದ್ದು ದರ್ಶನ್ ಎನ್ನುವುದು, ಹತ್ಯೆಗೆ ಮೂಲ ಕಾರಣ ಪವಿತ್ರಾ ಗೌಡ ಅನ್ನುವುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ.

ರೇಣುಕಾಸ್ವಾಮಿ ಹತ್ಯೆಗೆ ಪವಿತ್ರಾ ಗೌಡ ಮೂಲಕ ಕಾರಣವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು A1 ಆಗಿದ್ದಾರೆ. ಅಲ್ಲದೆ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುತ್ತಿದ್ದ ಸ್ಥಳದಲ್ಲಿ ಹಾಜರಿದ್ದು, ಚಪ್ಪಲಿಯಲ್ಲಿ ಅವರೂ ಹೊಡೆದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದರ ಕುರಿತು ಸಾಕ್ಷಿ ಸಿಕ್ಕಿದ್ದು, ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟೀವ್ ಆಗಿತ್ತು ಎಂದು ತಿಳಿಸಲಾಗಿದೆ.

ಇದಲ್ಲದೆ, ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ಅವರ ರಕ್ತ ಇರುವುದು ಪತ್ತೆ ಆಗಿದ್ದು, ಇದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾಗಿರುವುದು ದೃಢವಾಗಿದೆ ಎಂದು ತಿಳಿದುಬಂದಿದೆ.

ಜೂನ್ 9 ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್ 11 ರಂದು ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಕೊಲೆಯಂತಹ ಘೋರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ ನಂತರ ಪೊಲೀಸರು 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸುವುದು ಕಡ್ಡಾಯವಾಗಿದೆ.

Leave a Reply

Your email address will not be published. Required fields are marked *

You missed

error: Content is protected !!