Spread the love

ಸಂಯುಕ್ತ ಟೈಮ್ಸ್, ಮಾಸ್ಕೋ: ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವನ್ನಲ್ಲ ಎಂದು ರಷ್ಯಾದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.

ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಸಭೆ ನಡೆಯುತ್ತಿದೆ. ಪ್ರಪಂಚವು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ವಿಭಜನೆಯ ಬಗ್ಗೆಯೂ ಮಾತನಾಡುತ್ತಿದೆ. ಈ ಸಂದರ್ಭದಲ್ಲಿ ಹಣದುಬ್ಬರವನ್ನು ತಡೆಗಟ್ಟುವುದು ಮತ್ತು ಆಹಾರ, ಶಕ್ತಿ, ಆರೋಗ್ಯ ಮತ್ತು ನೀರಿನ ಭದ್ರತೆಯನ್ನು ಖಾತ್ರಿಪಡಿಸುವುದು ಆದ್ಯತೆಯ ವಿಷಯಗಳಾಗಿವೆ. ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಹಿತಿ (ಆನ್‌ಲೈನ್‌ನಲ್ಲಿ ಹರಡುವಿಕೆ) ಮತ್ತು ಡೀಪ್‌ಫೇಕ್‌ ಮೊದಲಾದ ಸೈಬರ್ ವಂಚನೆಗಳಂತಹ ಹೊಸ ಸವಾಲುಗಳು ಎದುರಾಗಿವೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಬ್ರಿಕ್ಸ್ ಗುಂಪಿನ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ. ನಾವು ವೈವಿಧ್ಯಮಯ ಮತ್ತು ಅಂತರ್ಗತ ವೇದಿಕೆಯಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದು ನಾನು ನಂಬುತ್ತೇನೆಂದು ಹೇಳಿದ್ದಾರೆ.

ನಮ್ಮ ವಿಧಾನವು ಜನಕೇಂದ್ರಿತವಾಗಿರಬೇಕು. ಬ್ರಿಕ್ಸ್‌ ವಿಭಜನೆ ಮಾಡುವುದಕ್ಕಾಗಿ ಅಲ್ಲ. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರನ್ನು ಎದುರಿಸಲು ನಮಗೆ ಎಲ್ಲರ ಏಕ ಮನಸ್ಸಿನ ಮತ್ತು ದೃಢವಾದ ಬೆಂಬಲ ಬೇಕು. ಈ ಗಂಭೀರ ವಿಷಯದಲ್ಲಿ ಎರಡು ಮಾನದಂಡಗಳಿಗೆ ಸ್ಥಳವಿಲ್ಲ ಎಂದು ಒತ್ತಿ ಹೇಳಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!