ಸಂಯುಕ್ತ ಟೈಮ್ಸ್, ಬೆಳಗಾವಿ: ಕಳೆದ 19 ವರ್ಷಗಳಲ್ಲಿ 12 ಅಧಿವೇಶನಗಳಿಗೆ ಸಾಕ್ಷಿಯಾಗಿರುವ ಗಡಿ ಭಾಗದ ಜನರು ಅಧಿವೇಶನದ ಜತೆಗೆ ಅದರ ಖರ್ಚುವೆಚ್ಚದ ಮೊತ್ತದಲ್ಲೂ ಗಣನೀಯ ಹೆಚ್ಚಳ ಕಂಡಿದ್ದಾರೆ. ಇದುವರೆಗೆ ನಡೆದಿರುವ 12 ಅಧಿವೇಶನಗಳಿಗೆ ತಗಲಿರುವ ವೆಚ್ಚ ಸುಮಾರು 140 ಕೋಟಿ ರೂ.ಗಳು ಎಂಬುದೇ ಇದಕ್ಕೆ ನಿದರ್ಶನ. ಈಗ ಇದರ ಸಾಲಿಗೆ 13ನೇ ಅಧಿವೇಶನವೂ ಸೇರಿದ್ದು, ಇದರ ಖರ್ಚು ವೆಚ್ಚದ ಪ್ರಸ್ತಾವನೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇಷ್ಟೊಂದು ವೆಚ್ಚದಿಂದ ಉತ್ತರ ಕರ್ನಾಟಕದ ಜನರಿಗೆ ಎಷ್ಟು ಅನುಕೂಲವಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಈಗ ಮತ್ತೆ ಚಳಿಗಾಲದ ಅಧಿವೇಶನ ಬಂದಿದೆ. ಡಿ. 9ರಿಂದ ಆರಂಭವಾಗಲಿರುವ ಅಧಿವೇಶನವನ್ನು 10 ದಿನಗಳ ಬದಲು ಒಂದು ದಿನ ಕಡಿತಗೊಳಿಸಲಾಗಿದೆ. ಆದರೆ ಅಧಿವೇಶನಕ್ಕೆ ತಗಲುವ ಖರ್ಚು ವೆಚ್ಚದಲ್ಲಿ ಅಂತಹ ಬದಲಾವಣೆ ಕಾಣುತ್ತಿಲ್ಲ. ಅಧಿವೇಶನಕ್ಕೆ ಸುಮಾರು 13 ಕೋಟಿ ರೂ. ಬೇಕು ಎಂದು ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ವರ್ಷ ವರ್ಷವೂ ಅಧಿವೇಶನ ನಡೆಯುತ್ತದೆಯೇ ವಿನಾ ಯಾವ ಪ್ರಯೋಜನವೂ ಆಗಿಲ್ಲ ಎಂಬ ವ್ಯಾಪಕ ಅಸಮಾಧಾನದ ನಡುವೆಯೇ ಈ ವರ್ಷದ ಅಧಿವೇಶನಕ್ಕೆ 13.21 ಕೋಟಿ ರೂ. ನೀಡುವಂತೆ ಜಿಲ್ಲಾಡಳಿತ ಸಲ್ಲಿಸಿರುವ ಪ್ರಸ್ತಾವನೆ ಎಲ್ಲರ ಹುಬ್ಬೇರುವಂತೆ ಮಾಡಿದೆ.

