ಸಂಯುಕ್ತ ಟೈಮ್ಸ್, ಬೆಂಗಳೂರು: 950 ಗ್ರಾಂ. ಚಿನ್ನ ವಂಚನೆ ಮತ್ತು ದುರ್ಬಳಕೆ ಆರೋಪದಡಿ ಕಾಟನ್ ಪೇಟೆ ಠಾಣೆಯ PSI ಸಂತೋಷನನ್ನು ಅಮಾನತ್ತುಗೊಳಿಸಿ ಪೊಲೀಸ್ ಕಮಿಷನರ್ ದಯಾನಂದ ಆದೇಶ ಹೊರಡಿಸಿದ್ದಾರೆ.

2020ರಲ್ಲಿ ಸಂತೋಷ್ ಹಲಸೂರು ಗೇಟ್ ಠಾಣೆಯ PSI ಆಗಿದ್ದರು. ಆ ಸಮಯದಲ್ಲಿ ಕೇಸ್ವೊಂದರ ರಿಕವರಿ ಚಿನ್ನವನ್ನು ದುರ್ಬಳಕೆ ಮಾಡಿಕೊಂಡಿದ್ದರು. ಚಿನ್ನದ ಅಂಗಡಿ ಮಾಲೀಕನ ಬಳಿ ಹೋಗಿ ರಿಕವರಿ ಚಿನ್ನ ತೋರಿಸಬೇಕಿದೆ, ಹೀಗಾಗಿ 950 ಗ್ರಾಂ. ಚಿನ್ನದ ಗಟ್ಟಿ ಕೊಡು, ಫೋಟೊ ತೆಗೆಸಿ ವಾಪಸ್ ತಂದುಕೊಡುತ್ತೇನೆ ಎಂದು ಹೇಳಿದ್ದ.
ಸಂತೋಷ್ ಮಾತನ್ನು ನಂಬಿ ಚಿನ್ನದ ಅಂಗಡಿ ಮಾಲೀಕ 950 ಗ್ರಾಂ. ಚಿನ್ನದ ಗಟ್ಟಿಯನ್ನು ನೀಡಿದ್ದರು. ಬಳಿಕ ಮಾಲೀಕ ಚಿನ್ನ ವಾಪಸ್ ಕೇಳಿದಾಗ ಸಂತೋಷ್ ಹಣ ನೀಡುತ್ತೇನೆಂದು ಹೇಳಿ ಭದ್ರತೆಗೆ ಸೈಟ್ ಕರಾರು ಮಾಡಿಕೊಟ್ಟಿದ್ದ, ಆದರೆ ಆ ಸೈಟ್ನ್ನು ಬೇರೆಯವರಿಗೆ ಮಾರಾಟ ಮಾಡಿದ್ದ. ಮಾಲೀಕ ಮತ್ತೆ ಪ್ರಶ್ನಿಸಿದಾಗ ಖಾಲಿ ಚೆಕ್ ನೀಡಿದ್ದ, ಅದು ಕೂಡ ಬೌನ್ಸ್ ಆಗಿತ್ತು. ಅದಾದ ಬಳಿಕವೂ ಮಾಲೀಕ ಹಣ ಮತ್ತು ಚಿನ್ನ ಕೇಳಿದಾಗ ಸಂತೋಷ್ ಆತನಿಗೆ ಬೆದರಿಕೆ ಹಾಕಿದ್ದ. ಇದರಿಂದ ಬೇಸತ್ತ ಮಾಲೀಕ ಪಶ್ಚಿಮ ವಿಭಾಗ DCPಗೆ ದೂರು ನೀಡಿದ್ದರು.
ದೂರಿನ ಬಗ್ಗೆ ACP ನೇತೃತ್ವದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಪ್ರಾಥಮಿಕ ವರದಿ ಆಧಾರದ ಮೇಲೆ PSI ಕ್ರಮಕ್ಕೆ ಸೂಚಿಸಿದ್ದು, ಅಧಿಕಾರ ದುರುಪಯೋಗ, ವಂಚನೆ ಕೇಸ್ ಅಡಿಯಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಸಂತೋಷ್ ವಿರುದ್ಧ FIR ದಾಖಲಾಗಿತ್ತು. ಸದ್ಯ FIR ದಾಖಲಾದ ಹಿನ್ನೆಲೆ PSI ಸಂತೋಷ್ ಅಮಾನತ್ತು ಮಾಡಿ, ಪೊಲೀಸ್ ಕಮಿಷನರ್ ದಯಾನಂದ ಆದೇಶ ಹೊರಡಿಸಿದ್ದಾರೆ.

