Spread the love

ಸಂಯುಕ್ತ ಟೈಮ್ಸ್, ಬೆಳಗಾವಿ:  ಸೈಬರ್‌ ವಂಚಕರ ಕಾಟ ತಾಳಲಾರದೇ ವೃದ್ಧ ದಂಪತಿ ಗುರುವಾರ ತಡರಾತ್ರಿ ಆತ್ಮಹತ್ಯೆಗೆ ಶರಣಾದ ಘಟನೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಆತ್ಮಹತ್ಯೆಗೆ ಶರಣಾದ ದಂಪತಿ. ಆತ್ಮಹತ್ಯೆಗೆ ಮುನ್ನ ದಂಪತಿ ಇಂಗ್ಲಿಷ್‌ನಲ್ಲಿ ಬರೆದ ಡೆತ್‌ನೋಟ್‌ ಲಭ್ಯವಾಗಿದೆ.

ಫ್ಲೇವಿಯಾನಾ ನಜರೆತ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರೆ, ಡಯಾಗೊ ಚಾಕುವಿನಿಂದ ಕುತ್ತಿಗೆ ಕೊಯ್ದು ಸೂಸೈಡ್‌ ಮಾಡಿಕೊಂಡಿದ್ದಾರೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ ಪ್ರತಿಕ್ರಿಯಿಸಿ, ಸೈಬರ್ ವಂಚಕರು ಬೆದರಿಕೆ ಕರೆ ಮಾಡಿ ಡಯಾಗೊ ಅವರಿಂದ 50 ಲಕ್ಷ ರೂ. ಹೆಚ್ಚು ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಸುಮ್ಮನಾಗದೇ ಮತ್ತೆ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಜೀವನವನ್ನು ಕೊನೆಗೊಳಿಸಲು ದಂಪತಿ ನಿರ್ಧರಿಸಿದ್ದರು. ತಮ್ಮ ಡೆತ್ ನೋಟ್‌ನಲ್ಲಿ, ದಂಪತಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ಅದನ್ನು ತಮ್ಮ ಆಸ್ತಿಗಳನ್ನು ಮಾರಿ ಮರುಪಾವತಿಸಬೇಕೆಂದು ಹೇಳಿದ್ದಾರೆ ಎಂದು ತಿಳಿಸಿದರು.

ಕೆಲ ದಿನಗಳ ಹಿಂದೆ ದೆಹಲಿ ಕ್ರೈಂ ಬ್ರಾಂಚನಿಂದ ನಮಗೆ ವಿಡಿಯೋ ಕರೆ ಬಂದಿತ್ತು. ಆ ಕರೆಯಲ್ಲಿ ನೀವು ಅಪರಾಧ ಒಂದರಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಲಾಗಿತ್ತು. ಬಳಿಕ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಭಯಗೊಂಡು ನಾವು ಅವರು ಹೇಳಿದ ಖಾತೆಗೆ ಹಣ ಹಾಕಿದ್ದೆವು.

ಹಣ ಪಾವತಿ ಮಾಡಿದ ಬಳಿಕವೂ ಮತ್ತೆ ವಿಡಿಯೋ ಕಾಲ್ ಮಾಡಿ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅರೆಸ್ಟ್‌ ಮಾಡುತ್ತೇವೆ ಎಂದು ಬೆದರಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿದ್ದಾರೆ. ಡೆತ್ ನೋಟ್‌ನಲ್ಲಿ ದಂಪತಿ ತಮ್ಮ ದೇಹವನ್ನು ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಗೆ ದಾನ ಮಾಡುವಂತೆ ಮನವಿ ಮಾಡಿದ್ದಾರೆ.

ಮೃತ ಡಿಯಾಗೋ ಮಹಾರಾಷ್ಟ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಿಗೆ ತರಬೇತಿ ನೀಡಿದ್ದರು. ದಂಪತಿಯ ಶವವನ್ನು ಹಸ್ತಾಂತರಿಸಿದ್ದರೂ ತಾಂತ್ರಿಕ ಕಾರಣಗಳಿಂದ ಬಿಐಎಂಎಸ್ ಶವಗಳನ್ನು ಸ್ವೀಕರಿಸಲಿಲ್ಲ. ನಂತರ ನಂತರ ಎರಡೂ ಶವಗಳನ್ನು ಬೀಡಿ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದೆ.

ಹೇಗೆ ಬೆಳಕಿಗೆ ಬಂತು: 

ವೃದ್ಧ ದಂಪತಿ ಮನೆಗೆ ಇಂದು ನೆರೆ ಮನೆಯ ಮಹಿಳೆ ಎಂದಿನಂತೆ ಬಂದಿದ್ದಾರೆ. ಎಷ್ಟು ಕರೆದರೂ ಬಾಗಿಲು ತೆಗೆಯದ ಕಾರಣ ಕಿಟಕಿಯಿಂದ ವೃದ್ಧ ದಂಪತಿಯ ಮೃತದೇಹ ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ‌ನಂದಗಡ‌ ಠಾಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ವೃದ್ಧ ದಂಪತಿ ಮೃತ ದೇಹಗಳನ್ನು ಮರಣೋತ್ತರ ‌ಪರೀಕ್ಷೆಗೆ ಬಿಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!