ಸಂಯುಕ್ತ ಟೈಮ್ಸ್, ನವದೆಹಲಿ: ಪಹಲ್ಗಾಮ್ನಲ್ಲಿ ನಡೆದ ಹಿಂದೂಗಳ ನರಮೇಧ ಕೃತ್ಯಕ್ಕೆ ಭಾರತ ಪ್ರತೀಕಾರದ ಪಣ ತೊಟ್ಟಿದೆ. ಉಗ್ರರು ಊಹೆಯೂ ಮಾಡದಂತಹ ಶಿಕ್ಷೆ ಅನುಭವಿಸ್ತಾರೆ ಅಂತ ಪ್ರಧಾನಿ ಮೋದಿ ಕಟು ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಯಾವೊಬ್ಬ ಪಾಕಿಸ್ತಾನಿ ಪ್ರಜೆಯೂ ಕೇಂದ್ರ ಸರ್ಕಾರ ನೀಡಿರುವ ಗಡುವನ್ನು ಮೀರಿ ದೇಶದಲ್ಲಿ ಉಳಿಯದಂತೆ ನೋಡಿಕೊಳ್ಳಬೇಕೆಂದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದ್ದಾರೆ.

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಈ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಎಲ್ಲಾ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆಹಚ್ಚಿ ದೇಶದಿಂದ ವಾಪಸ್ ಕಳುಹಿಸಬೇಕು ಎಂದು ಹೇಳಿದ್ದಾರೆಂದು ವರದಿಯಾಗಿದೆ.
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಪಾಕ್ ಸಂಬಂಧ ಕಡಿದುಕೊಂಡ ಭಾರತ ಸರ್ಕಾರದ ʻಪಂಚʼ ನಿರ್ಣಯಗಳಲ್ಲಿ ಪಾಕಿಸ್ತಾನಿ ಪ್ರಜೆಗಳ ವೀಸಾ ರಸ್ಸುಗೊಳಿಸುವುದು ಒಂದಾಗಿದೆ.
ಭಾರತ ಸರ್ಕಾರ ಕೈಗೊಂಡ ಕ್ರಮಗಳೇನು:
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 1960ರ ಸೆಪ್ಟೆಂಬರ್ 19ರಂದು ಸಹಿ ಹಾಕಲಾಗಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿದಿದೆ. ಇದರೊಂದಿಗೆ ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಧೂ ನದಿ ಮತ್ತು ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳಿಂದ ನೀರು ಸರಬರಾಜು ನಿಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ. ಜೊತೆಗೆ ಅಟ್ಟಾರಿ-ವಾಘಾ ಗಡಿ ಮುಚ್ಚಲು ಭಾರತ ತೀರ್ಮಾನಿಸಿದೆ. ಅಷ್ಟೇ ಅಲ್ಲದೇ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ವೀಸಾಗಳ ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ನೀಡಿದ ಅನುಮತಿಯನ್ನು ತಡೆಹಿಡಿಯಲಾಗುತ್ತಿದೆ. ಈ ಹಿಂದೆ ನೀಡಿದ್ದ ಯಾವುದೇ SVES ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗುತ್ತದೆ. ಈ ವೀಸಾ ಅಡಿಯಲ್ಲಿ ಭಾರತದಲ್ಲಿರುವ ಯಾವುದೇ ಪಾಕಿಸ್ತಾನಿ ಪ್ರಜೆ 48 ಗಂಟೆಯೊಳಗೆ ಭಾರತ ತೊರೆಯಬೇಕೆಂದು ಹೇಳಿದೆ. ಜೊತೆಗೆ ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್, ರಕ್ಷಣಾ/ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಹಂತಹಂತವಾಗಿ ಭಾರತದಿಂದ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ.

