ಸಂಯುಕ್ತ ಟೈಮ್ಸ್, ನವದೆಹಲಿ: ಕರ್ನಲ್ ಸೋಫಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಜಯ್ ಶಾ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಹೇಳಿಕೆ ಸಂಬಂಧ ವಿಚಾರಣೆ ನಡೆಸಿದ್ದ ಜಬ್ಬಲ್ಪುರ ಹೈಕೋರ್ಟ್ ಸಚಿವ ವಿಜಯ್ ಶಾ ವಿರುದ್ಧ FIR ದಾಖಲಿಸುವಂತೆ ಆದೇಶಿಸಿತ್ತು. ಈ ಆದೇಶದ ಬೆನ್ನಲ್ಲೇ ವಿಜಯ್ ಶಾ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಈ ರೀತಿ ಹೇಳಿಕೆಗಳನ್ನು ನೀಡುವಾಗ ಎಚ್ಚರವಿರಲಿ ಎಂದಿದೆ.
ವಿಜಯ್ ಶಾ ನೀಡಿದ ಹೇಳಿಕೆಗಳನ್ನು ಟೀಕಿಸಿದ ಕೋರ್ಟ್, ದೇಶವು ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಸಚಿವರು ಜವಾಬ್ದಾರಿಯುತರಾಗಿರಬೇಕು ಎನ್ನುವುದು ನಮ್ಮೆಲ್ಲರ ನಿರೀಕ್ಷೆ ಎಂದು ಒತ್ತಿ ಹೇಳಿದೆ.
ವಿಜಯ್ ಶಾ ಹೇಳಿದ್ದೇನು:
ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಶಾ ಅವರು ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸನ್ನು ಹೇಳಿ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದರು.
ಭಾಷಣದಲ್ಲಿ, ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಆ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ನಾವು ಕಳುಹಿಸಿದ್ದೇವೆ ಎಂದು ಹೇಳಿದ್ದರು.
ಭಾಷಣದಲ್ಲಿ ವಿಜಯ್ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರರನ್ನು ಸದೆ ಬಡಿಯಲು ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಸ್ಪಷ್ಟವಾಗಿ ಹೇಳದೇ ಇದ್ದರೂ ಅವರನ್ನು ಉಲ್ಲೇಖಿಸಿಯೇ ಭಾಷಣ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬಳಿಕ ಜಬ್ಬಲ್ಪುರ ಹೈಕೋರ್ಟ್ ಇದನ್ನು ಅಶ್ಲೀಲ ಭಾಷೆ ಎಂದು ಪರಿಗಣಿಸಿತ್ತು. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ವಿಜಯ್ ಶಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು

