Spread the love

ಸಂಯುಕ್ತ ಟೈಮ್ಸ್, ಬೆಂಗಳೂರು: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಧಾನಸಭೆಯ ಸಭಾಂಗಣದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ವಿಧಾನಸೌಧ ಗೈಡೆಡ್ ಟೂರಗೆ ಇಂದು ಚಾಲನೆ ನೀಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ್, ಗೈಡೆಡ್ ಟೂರ್ ಅನ್ನು ಬಹಳ ಚಿಂತನೆ ಮಾಡಿ ಆರಂಭಿಸಲಾಗುತ್ತಿದೆ. ಇಂದಿನಿಂದ ವಿಧಾನಸೌಧ ಕಟ್ಟಡ ಸಾರ್ವಜನಿಕರ ಪ್ರವಾಸಕ್ಕೆ ಮುಕ್ತವಾಗಿದೆ. ಜಗತ್ತಿನಲ್ಲೇ ಅತ್ಯಂತ ಸುಂದರ ಕಟ್ಟಡ ವಿಧಾನಸೌಧವಾಗಿದ್ದು, ಪ್ರಜಾಪ್ರಭುತ್ವದ ದೇಗುಲ. ಆಸಕ್ತರಿಗೆ, ವಿದ್ಯಾರ್ಥಿಗಳಿಗೆ, ಜನರಿಗೆ ಇದರ ದರ್ಶನ ಮಾಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಗೈಡೆಡ್ ಟೂರ್ ಮನರಂಜನೆಯ ಪ್ರವಾಸ ಅಲ್ಲ. ಇಲ್ಲಿಗೆ ಬಂದವರು ಜ್ಞಾನ ಪಡೆದು ಹೋಗಬೇಕು, ತಮ್ಮ ಕನಸುಗಳಿಗೆ ಚುರುಕು ಕೊಡಬೇಕು, ಪ್ರಜಾಪ್ರಭುತ್ವ ಗಟ್ಟಿ ಮಾಡುವ ಛಲ ಬರಬೇಕು. ಒಮ್ಮೆ ಸುತ್ತಿ ಬರೋಣ ಅಂತ ಇಲ್ಲಿಗೆ ಬರೋದಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹಿಂದೆ ನಾವು ವಿದ್ಯಾರ್ಥಿಗಳಾಗಿದ್ದಾಗ ವಿಧಾನಸೌಧ ನೋಡಲು ಬಂದಿದ್ದೆವು. ಆಗ ಪಾಸ್ ಕೇಳಿದ್ವಿ ಆದರೆ ಪಾಸ್ ಕೊಡಲು ನಿರಾಕರಿಸಿದರು. ಯಾಕೆ ಅಂದರೆ ನೀವೇ ಬಸವರಾಜ ಹೊರಟ್ಟಿ ಅನ್ನೋದಕ್ಕೆ ಏನು ಸಾಕ್ಷಿ ಅಂದರು. ಯಾವುದಾದರೂ ಐಡೆಂಟಿಟಿ ಕಾರ್ಡ್ ಕೇಳಿದರು ಇಲ್ಲ ಅಂದೆ. ಅದಕ್ಕೆ ಪಾಸ್ ಕೊಡಲೇ ಇಲ್ಲ. ಬಳಿಕ ಮತ್ತೊಬ್ಬರ ಮೂಲಕ ಪಾಸ್ ತೆಗೆದುಕೊಂಡು ವಿಧಾನಸೌಧ ನೋಡಿದೆವು. ಬಳಿಕ ಶಾಸಕರಾದ್ರೆ ಮಾತ್ರ ಇಲ್ಲಿಗೆ ಬರಲು ಸಾಧ್ಯ ಎಂದು ಹೇಳಿದ್ದರು ಎಂದು ಹಳೆಯ ನೆನಪು ಮೆಲುಕು ಹಾಕಿದರು.

Leave a Reply

Your email address will not be published. Required fields are marked *

You missed

error: Content is protected !!