Spread the love

ಸಂಯುಕ್ತ ಟೈಮ್ಸ್, ಗದಗ:  ಇದೊಂದು ಮಣ್ಣಲ್ಲಿ ಮಣ್ಣಾಗಿದ್ದ ಪಾಗಲ್ ಪ್ರೇಮಿಯ ಕೊಲೆ ಪ್ರಕರಣ. ಇದೀಗ ಪೊಲೀಸರ ಚಾಣಾಕ್ಷತನದಿಂದ 6 ತಿಂಗಳ ಬಳಿಕ ಕೊಲೆ ರಹಸ್ಯ ಬಯಲಾಗಿದ್ದು, ಸಿನಿಮೀಯ ರೀತಿಯಲ್ಲಿ ಸಾಕ್ಷಿ ನಾಶ ಮಾಡಿದ್ದ ಖತರ್ನಾಕ್ ಕಿಲಾಡಿ ಪ್ರಿಯಕರ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ಗದಗ ಜಿಲ್ಲೆಯಲ್ಲಿ ಪ್ರೀತಿ ಬಲೆಗೆ ಬಿದ್ದ ಯುವತಿ ಕೊಲೆ ಪ್ರಕರಣವು ಬೆಚ್ಚಿ ಬೀಳಿಸಿದೆ. 2025 ಜನವರಿ 12ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಯುವತಿ ನಾಪತ್ತೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಕಾಣೆಯಾಗಿದ್ದ ಯುವತಿಯು 6 ತಿಂಗಳ ಬಳಿಕ ಮೂಳೆಗಳ ರೂಪದಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಿಯಕರನೇ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಬಯಲಾಗಿದೆ. 

ನಾರಾಯಣಪುರ ಗ್ರಾಮದ ಸತೀಶ್ ಹಿರೇಮಠ ಬಂಧಿತ ಆರೋಪಿ. ಅದೇ ಗ್ರಾಮದ ಮಧುಶ್ರೀ ಅಂಗಡಿ ಎಂಬ ಕೊಲೆಯಾಗಿದ್ದ ಯುವತಿ. ಈ ಕೊಲೆ ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತೀಶ್ ಹಾಗೂ ಮಧುಶ್ರೀ ಇಬ್ಬರು 6 ವರ್ಷಗಳಿಂದ ಪ್ರೀತಿ ಮಾಡ್ತಿದ್ದರು. ಯುವತಿ ಮನೆಯಲ್ಲಿ ಇಬ್ಬರ ವಿಷಯ ಗೊತ್ತಾಗಿ, ಆಕೆಯನ್ನು ಗದಗ ನಗರದ ಪಂಚಾಕಯನಗರದ ಸಂಬಂಧಿಕರ ಮನೆಗೆ ಕಳುಹಿಸಲಾಗಿತ್ತು ಎಂದಿದ್ದಾರೆ.

ಇಷ್ಟಾದರೂ ಇಬ್ಬರು ಮತ್ತೆ ಒಂದಾಗಿದ್ದರು. ನನ್ನನ್ನು ಮದುವೆಯಾಗು ಎಂದು ಸತೀಶ್ ಜೊತೆ ಯುವತಿ ಜಗಳವಾಡಿದ್ದಳು. ಜಗಳ ವಿಕೋಪಕ್ಕೆ ತಿರುಗಿ ಆಕೆ ಧರಿಸಿದ್ದ ಶಾಲ್‌ನಿಂದಲೇ ಕುತ್ತಿಗೆ ಬಿಗಿದು ಆರೋಪಿ ಕೊಲೆ ಮಾಡಿದ್ದ. ನಂತರ ನಾರಾಯಣಪುರ ಗ್ರಾಮದಲ್ಲಿರುವ ಆತನ ಜಮೀನಿನ ಬಳಿ ಹಳ್ಳದ ದಂಡೆಯಲ್ಲಿ ಯುವತಿ ಶವ ಹೂತು ಹಾಕಿದ್ದ ಎಂದು ಹೇಳಿದ್ದಾರೆ.

ತನಿಖೆಗಿಳಿದ ಪೊಲೀಸರಿಗೆ ಯುವತಿಯ ಮೃತದೇಹದ ಗುರುತು ಸಿಗದ ರೀತಿಯಲ್ಲಿ ಬರೀ ಮೂಳೆಗಳು ದೊರೆತಿದ್ದು, ಜೂ. 16ರಂದು ವಿಧಿವಿಜ್ಞಾನ ತಜ್ಞರು ಮೂಳೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಿದ್ದರು ಎಂದು ಕೊಲೆ ಪ್ರಕರಣದ ತನಿಖೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಯುವತಿಯ ಕೊಲೆ ಮಾಡಿ ಪ್ರಕರಣದ ದಿಕ್ಕನ್ನೇ ಬದಲಿಸಿ, ತನಿಖೆಯ ಹಾದಿ ತಪ್ಪಿಸಿದ್ದ ಆರೋಪಿಗೆ ಪೊಲೀಸರು ಜೈಲಿನ ಹಾದಿ ತೋರಿಸಿದ್ದಾರೆ. 

ಯುವತಿ ನಾಪತ್ತೆಯಾಗಿದ್ದಳೋ, ಕೊಲೆಯಾಗಿದ್ದಾಳೋ ಎಂಬುದು ತನಿಖೆಯನ್ನು ಪೊಲೀಸರಿಗೆ ಚಾಲೆಂಜಿಂಗ್ ಆಗಿತ್ತು. ಆರೋಪಿಯ ಸಂಶಯಾಸ್ಪದ ನಡವಳಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಚಲನವಲನ ಗಮನಿಸಿದ ಪೊಲೀಸರು ಪುನಃ ವಿಚಾರಣೆ ಆರಂಭಿಸಿದ್ದರು.

ಈ ವೇಳೆ 2024ರ ಡಿಸೆಂಬರ್ 16ರ ರಾತ್ರಿ 10ರ ಸುಮಾರಿಗೆ ಆರೋಪಿ ಸತೀಶ್, ಯುವತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ತಿರುಗಾಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವೀಡಿಯೋ ಕೊಲೆ ಪ್ರಕರಣಕ್ಕೆ ಮಹತ್ವದ ಸಾಕ್ಷಿಯಾಗಿ ದೊರೆತಿತ್ತು. ಈ ಕುರಿತು ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಸಂಶಯ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪೊಲೀಸರು, ಆರೋಪಿಯನ್ನು ವಿಚಾರಿಸಿದಾಗ ನಿಜಾಂಶ ಬಾಯಿ ಬಿಟ್ಟಿದ್ದಾನೆ.

ಈ ಪ್ರಕರಣದ ತನಿಖೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಡಿವೈಎಸ್‌ಪಿ ಮುರ್ತುಜಾ ಖಾದ್ರಿ, ಪ್ರಭುಗೌಡ ಕಿರೇದಳ್ಳಿ, ಮಹಾಂತೇಶ್ ಸಜ್ಜನ ಮಾರ್ಗದರ್ಶನದಲ್ಲಿ ಸಿಪಿಐ ಧೀರಜ್ ಸಿಂಧೆ, ಪಿಎಸ್‌ಐ ಮಾರುತಿ ಜೋಗದಂಡಕರ್, ಸಿಬ್ಬಂದಿ ಎನ್.ಡಿ.ಹುಬ್ಬಳ್ಳಿ, ಸಂತೋಷ್ ದೋಣಿ, ನವೀನ್ ದೇವಪೂರ, ಪರಶುರಾಮ್ ದೊಡ್ಡಮನಿ, ಅಶೋಕ್ ಗದಗ, ನಾಗರಾಜ್ ಬರಡಿ, ಅಕ್ಷಯ್ ಬಾದಾಮಿ ಭಾಗವಹಿಸಿದ್ದರು. ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಬಹುಮಾನ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!