Spread the love

ಸಂಯುಕ್ತ ಟೈಮ್ಸ್, ಬೆಂಗಳೂರು:  ಇಂದಿರಾ ನಗರದ ಐಟಿ ಉದ್ಯೋಗಿಯೊಬ್ಬರಿಗೆ ಸೈಬರ್‌ ವಂಚಕರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಬೆದರಿಸಿ 31 ಕೋಟಿ ರೂ. ವಂಚಿಸಿದ್ದಾರೆ.

ನಗರದ ಉಮಾರಾಣಿ ವಂಚನೆಗೊಳಗಾದ ಮಹಿಳಾ ಟೆಕ್ಕಿ 2024ರ ಸೆಪ್ಟೆಂಬರ್ 15ರಂದು ಕರೆ ಮಾಡಿದ್ದ ಅನಾಮಿಕ ವ್ಯಕ್ತಿ, ತಾನು DHL ಕೊರಿಯರ್ ಸರ್ವಿಸ್‌ನಿಂದ ಕರೆ ಮಾಡಿದ್ದಾಗಿ ಪರಿಚಯ ಮಾಡಿಕೊಂಡಿದ್ದ. ಮುಂಬೈನ ಅಂಧೇರಿಯ ಡಿಎಚ್‌ಎಲ್‌ ಕೇಂದ್ರದಿಂದ ನಿಮ್ಮ ಹೆಸರಿಗೆ ಪಾರ್ಸೆಲ್‌ ಬಂದಿದೆ. ಅದರಲ್ಲಿ ಮೂರು ಕ್ರೆಡಿಟ್ ಕಾರ್ಡ್, ನಾಲ್ಕು ಪಾಸ್‌ಪೋರ್ಟ್ ಮತ್ತು ಎಂಡಿಎಂಎ ಡ್ರಗ್ಸ್‌ ಇದೆ ಎಂದಿದ್ದ. ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಕಾರಣ ತನಗೂ ಪಾರ್ಸೆಲ್‌ಗೂ ಸಂಬಂಧವಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.

ಪಾರ್ಸೆಲ್ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಇರುವ ಕಾರಣ ಇದು ಸೈಬ‌ರ್ ಅಪರಾಧವಾಗಿದ್ದು, ಸೈಬ‌ರ್ ಸೆಲ್‌ಗೆ ವರದಿ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದ. ಇದಾದ ಬಳಿಕ ವಿಡಿಯೋ ಕರೆ ಮಾಡಿದ ಇನ್ನೋರ್ವ ವ್ಯಕ್ತಿ, ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ವಿಚಾರವನ್ನು ತಮ್ಮ ಕುಟುಂಬದವರಿಗೆ ತಿಳಿಸಿದರೆ, ಅವರ ಹೆಸರನ್ನು ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿದ್ದ.

2024ರ ಸೆಪ್ಟೆಂಬರ್ 23ರಂದು ವಿಡಿಯೊ ಕರೆ ಮಾಡಿದ ವ್ಯಕ್ತಿ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ಒಂದು ವಾರ ಸಂತ್ರಸ್ತೆಯ ವಿಚಾರಣೆ ನಡೆಸಿದ್ದ. ಆರ್‌ಬಿಐನ ಫೈನಾನ್ಸಿಯಲ್ ಇಂಟೆಲಿಜೆನ್ಸ್‌ ಯೂನಿಟ್‌ಗೆ (FIU) ತಮ್ಮ ಆಸ್ತಿಯ ವಿವರಗಳನ್ನು ಘೋಷಿಸಬೇಕು. ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಬೇಕಿರುವ ಕಾರಣ, ಹಣ ವರ್ಗಾವಣೆ ಮಾಡಬೇಕು. ಪರಿಶೀಲನೆ ಬಳಿಕ ಹಣವನ್ನು ವಾಪಸ್ ನೀಡಲಾಗುವುದು ಎಂದು ಹೇಳಿದ್ದ. ಆತನ ಮಾತು ನಂಬಿ, ಸಂತ್ರಸ್ತೆ ತಮ್ಮ ನಿಶ್ಚಿತ ಠೇವಣಿ ಮತ್ತು ಉಳಿತಾಯ ಖಾತೆಯಲ್ಲಿದ್ದ ಹಣವನ್ನು 187 ಬಾರಿ ವಂಚಕರು ನೀಡಿದ್ದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು‌‌.

2024ರ ಡಿಸೆಂಬರ್ 6ರಂದು ದೂರುದಾರ ಮಹಿಳೆಯ ಮಗನ ನಿಶ್ಚಿತಾರ್ಥ ನಡೆದಿತ್ತು. ವಂಚಕರು ಸಂತ್ರಸ್ತೆಗೆ ಹಣ ವಾಪಸ್ ನೀಡಿರಲಿಲ್ಲ. ಮಾರ್ಚ್ 26ರಂದು ತಮ್ಮ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಿದ್ದು. ಈ ಅವಧಿಯಲ್ಲಿ ಅಪರಿಚಿತ ವ್ಯಕ್ತಿಗಳು ಸಂತ್ರಸ್ತೆಗೆ ಕರೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ವಿಭಾಗದ CEN ಪೊಲೀಸರು ದೊಡ್ಡ ಮಟ್ಟದ ಅಮೌಂಟ್ ಆಗಿರುವ ಕಾರಣ ಪ್ರಕರಣ ತನಿಖೆಗೆ ಮಾಡಲು CIDಗೆ ವರ್ಗಾವಣೆ ಮಾಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!