ಹಾಸನ: ಮದುವೆಗೆ ಒಪ್ಪದ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಲಾಗಿದೆ. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಘಟನೆ ನಡೆದಿದ್ದು, ಅಪಹರಣದ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರ್ಪಿತಾ ಅಪರಹರಣಕ್ಕೊಳಗಾದ ಶಿಕ್ಷಕಿ. ಇಂದು ಬೆಳಗ್ಗೆ ಸುಮಾರು 8 ಗಂಟೆ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರ್ನಲ್ಲಿ ಬಂದು ಬಲವಂತವಾಗಿ ಎಳೆದೊಯ್ದಿದ್ದಾರೆ. ಅರ್ಪಿತಾ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಅರ್ಪಿತಾ ಸಂಬಂಧಿ ರಾಮು ಎಂಬಾತನೇ ಅಪಹರಣ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮದುವೆಗೆ ಅರ್ಪಿತಾ ಮತ್ತು ಕುಟುಂಬಸ್ಥರು ಒಪ್ಪದ ಹಿನ್ನೆಲೆ ಅಪಹರಣ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಸ್ಪಿ ಸುಜಾತಾ ಭೇಟಿ
ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜಾತಾ ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅರ್ಪಿತಾ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.
ಅರ್ಪಿತಾ ತಾಯಿಯ ಕಣ್ಣೀರು
ರಾಮು ಎಂಬವನೇ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಆತ ನಮ್ಮ ಚಿಕ್ಕಮನ ಮಗನಾಗಿದ್ದು, 15 ದಿನಗಳ ಹಿಂದೆ ಅಪ್ಪ-ಅಮ್ಮನ ಜೊತೆ ಬಂದಿದ್ದನು. ಮದುವೆ ಮಾಡಿಕೊಡಿ ಎಂದು ಹೇಳಿದ್ದರು. ಆದ್ರೆ ಮಗಳು ಒಪ್ಪದ ಹಿನ್ನೆಲೆ ನಾವು ಮದುವೆಗೆ ನಿರಾಕರಿಸಿದ್ದೇವೆ ಎಂದು ಅರ್ಪಿತಾ ತಾಯಿ ಹೇಳಿದ್ದಾರೆ.

