ಸಂಯುಕ್ತ ಟೈಮ್ಸ್, ಗೋಕಾಕ: ಅರಭಾವಿ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಗಳಡಿ ಸುಮಾರು ಒಟ್ಟು 1480 ಮನೆಗಳು ಮಂಜೂರಾಗಿವೆ. ಇದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ ಅವರಾದಿಗೆ 100, ದುರದುಂಡಿಗೆ 25, ಬಡಿಗವಾಡಗೆ 40, ತುಕ್ಕಾನಟ್ಟಿಗೆ 15, ಯಾದವಾಡಕ್ಕೆ 70, ಕಳ್ಳಿಗುದ್ದಿ, ನಲ್ಲಾನಟ್ಟಿಗೆ 25 , ಬಸವ ವಸತಿ ಯೋಜನೆಯಡಿ ಬಳೋಬಾಳ 75, ತಪಸಿಗೆ 200, ಹುಣಶಾಳ ಪಿವೈ ಗೆ 100, ಕಾಮನಕಟ್ಟಿಗೆ 120, ಅವರಾದಿಗೆ 200, ಯಾದವಾಡಕ್ಕೆ 150, ಬಡಿಗವಾಡಗೆ 100 ಮತ್ತು ಕಳ್ಳಿಗುದ್ದಿ ಗ್ರಾಮ ಪಂಚಾಯತಿಗೆ 150 ಹೆಚ್ಚುವರಿ ಮನೆಗಳು ಮಂಜೂರಾಗಿವೆ ಎಂದು ಸಭೆಗೆ ವಿವರಿಸಿದ ಅವರು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಬೇಕು. ಇದರಲ್ಲಿ ಯಾರಾದರೂ ಫಲಾನುಭವಿಗಳಿಂದ ದುಡ್ಡು ಪಡೆದು ಆಯ್ಕೆ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು. ಮನೆಗಳ ಹಂಚಿಕೆಯ ವಿಷಯದಲ್ಲಿ ನಿಜವಾದ ಬಡ ಕುಟುಂಬಗಳಿಗೆ ಅನ್ಯಾಯವಾಗಬಾರದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗೋಕಾಕ ಹಾಗೂ ಮೂಡಲಗಿ ತಾಲ್ಲೂಕು ಸೇರಿ 6516 ಹೆಕ್ಟೇರ್ ಪ್ರದೇಶವು ಬೆಳೆ ಹಾನಿಯಾಗಿದ್ದು, ಈ ಕೂಡಲೇ ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ NSF ಕಛೇರಿಯಲ್ಲಿ ಸೋಮವಾರದಂದು ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೇ ರೈತರಿಗೆ ಆಗಿರುವ ಬೆಳೆ ನಷ್ಟದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಇದುವರೆಗೂ ಪರಿಹಾರ ಧನ ಬಂದಿಲ್ಲವೆಂದು ದೂರಿದರು.
ಅತಿವೃಷ್ಟಿ ಹಾಗೂ ಪ್ರವಾಹದಿಂದ ಸುಮಾರು 6 ಕೋಟಿ ರೂ ಗಳಷ್ಟು ಕೃಷಿ ಬೆಳೆಗಳು ನಷ್ಟವಾಗಿವೆ. ಇದರಲ್ಲಿ ಈಗಾಗಲೇ ಸುಮಾರು 7 ಕೋಟಿ ರೂಗಳ ಬೆಳೆ ಪರಿಹಾರ ಸಂಬಂಧವಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಇದುವರೆಗೂ ರೈತರಿಗೆ ಪರಿಹಾರ ಧನ ಜಮಾ ಆಗಿಲ್ಲವೆಂದು ಅವರು ಬೇಸರ ಹೊರಹಾಕಿದರು.
ನೀರಾವರಿ ಕ್ಷೇತ್ರಗಳ ಬೆಳೆಗಳಿಗೆ ಪ್ರತಿ ಹೆಕ್ಟೆರ್ಗೆ ರೂ. 17 ಸಾವಿರ ಪರಿಹಾರ ನೀಡಲು ಮುಂದಾಗಿದೆ. ಅದರಲ್ಲಿ ಗೋಕಾಕ ತಾಲ್ಲೂಕಿನಲ್ಲಿ 2173 ಮತ್ತು ಮೂಡಲಗಿ ತಾಲ್ಲೂಕಿನಲ್ಲಿ 4243 ಹೆಕ್ಟೇರ್ ಪ್ರದೇಶವು ನೀರು ಪಾಲಾಗಿದೆ. ಜೊತೆಗೆ ೫೦ ಹೆಕ್ಟೆರ್ ತೋಟಗಾರಿಕೆ ಬೆಳೆಗಳು ನಾಶವಾಗಿವೆ ಇದರಿಂದ .ರೈತರು ಚಿಂತಾಜನಕ ಸ್ಥಿತಿಯಲ್ಲಿದ್ದು, ಕೂಡಲೇ ಸರ್ಕಾರವು ಹಾನಿಗೀಡಾದ ರೈತರ ಸಂಕಷ್ಟಕ್ಕೆ ಮುಂದಾಗಿ ಅವರ ಖಾತೆಗಳಿಗೆ ಪರಿಹಾರ ಮೊತ್ತವನ್ನು ನೀಡುವಂತೆ ಅವರು ಆಗ್ರಹಿಸಿದರು.
ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ತಾಲ್ಲೂಕಾ ಪಂಚಾಯತ ಕ್ರೀಯಾ ಯೋಜನೆಯೊಂದನ್ನು ಸಿದ್ಧಪಡಿಸಬೇಕು. ಪ್ರತಿ ಗ್ರಾಮ ಪಂಚಾಯತಿಗಳಿಗೆ ತಲಾ 40 ಲಕ್ಷ ರೂ ತನಕ ರಸ್ತೆಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ನೀಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕಾಗಿ ಸರ್ಕಾರವು ಬಸವ ವಸತಿ ಮನೆಗಳ ನಿರ್ಮಾಣಕ್ಕೆ 1.50 ಲಕ್ಷ ರೂ ಅನುದಾನ ಕೊಡಲಿದ್ದು,. ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ 2.25 ಲಕ್ಷ ರೂ. ಗಳನ್ನು ಪ್ರತಿ ಕುಟುಂಬದ ಫಲಾನುಭವಿಗಳಿಗೆ ಸರ್ಕಾರ ಅನುದಾನವನ್ನು ನೀಡಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಗಳಿಗೂ ತಲಾ 100 ಮನೆಗಳನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಭೆಯಲ್ಲಿ ತಿಳಿಸಿದರು.
ಮೂಡಲಗಿ ಪುರಸಭೆ, ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಿಗಳ ಅಭಿವೃಧಿಗಾಗಿ ತಲಾ 10 ಕೋಟಿ ರೂಪಾಯಿ ಅನುದಾನವನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಅನುದಾನದ ಬಿಡುಗಡೆಗಾಗಿ ಪ್ರಯತ್ನ ಮಾಡುತ್ತೇನೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಶರವೇಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಆದಷ್ಟು ಜನರ ಮೂಲ ಸೌಕರ್ಯಗಳನ್ನು ನೀಗಿಸಲು ಪ್ರಯತ್ನ ಪಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಮೇಶ್ವರ ಏತ ನೀರಾವರಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ಕೂಡಲೇ ಇದನ್ನು ಅಧಿಕಾರಿಗಳು ಸರಿಪಡಿಸಬೇಕು. ಲೋಳಸೂರ ಸೇತುವೆ ಕಾಮಗಾರಿಗೆ 50 ಕೋಟಿ ರೂಪಾಯಿ ಅನುದಾನ ಬಂದಿದ್ದು, ಇದರ ಕಾಮಗಾರಿಯನ್ನು ಆರಂಭಿಸಬೇಕು. ರಸ್ತೆಗಳ ಸುಧಾರಣೆಗಾಗಿ 25 ಕೋಟಿ ರೂಪಾಯಿಗಳ ಕಾಮಗಾರಿಗೆ ಪ್ರಸ್ತಾವನೆಯು ಸಲ್ಲಿಕೆಯಾಗಿದೆ. ನಿರಂತರ ಜ್ಯೋತಿ ಸಂಪರ್ಕಕ್ಕಾಗಿ ರೈತರಿಂದ ಬೇಡಿಕೆಗಳು ಬರುತ್ತಲೇ ಇವೆ. ತಿಗಡಿ ಮತ್ತು ಸುಣಧೋಳಿ ಜ್ಯಾಕ್ ವೆಲ್ ಬಗ್ಗೆಯೂ ನಿರಂತರ ಕಾಳಜಿ ವಹಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ಭೂ- ಮಾಪನ ಇಲಾಖೆಯ ಅಧಿಕಾರಿಗಳ ಬಗ್ಗೆಯೂ ರೈತರಿಂದ ವ್ಯಾಪಕವಾದ ದೂರುಗಳು ಈಗಾಗಲೇ ಬಂದಿವೆ. ಸಾಕಷ್ಟು ಬಾರಿ ತಿಳಿ ಹೇಳಿದರೂ ರೈತರ ಕೂಗುಗಳಿಗೆ ಸ್ಪಂದಿಸುತ್ತಿಲ್ಲ. ಪರಿಸ್ಥಿತಿ ಹೀಗೇಯೇ ಮುಂದುವರೆದರೆ ಯಾವುದೇ ಮುಲಾಜಿಲ್ಲದೇ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಶಾಸಕರು ನೀಡಿದರು.
ದೇವಸ್ಥಾನಗಳಿಗೆ ತೆರಳುತ್ತಿರುವ ಭಕ್ತರ ವಾಹನಗಳನ್ನು ಪೋಲಿಸರು ನಿಲ್ಲಿಸಿ ದಂಡವನ್ನು ಹಾಕುತ್ತಿರುವ ದೂರುಗಳು ಬರುತ್ತಿವೆ. ಕಾನೂನು ಪ್ರಕಾರವೇ ದಂಡವನ್ನು ಹಾಕಿ ನಮ್ಮದೇನೂ ಅಭ್ಯಂತರವಿಲ್ಲ, ಆದರೆ ಅನವಶ್ಯಕವಾಗಿ ಪ್ರಕರಣ ದಾಖಲು ಮಾಡಬೇಡಿ ಇದರಿಂದ ಭಕ್ತರಿಗೆ ಕಿರಿಕಿರಿಯಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳಿಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಸಿದರು.
ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೆ, ಮೂಡಲಗಿ ತಾ.ಪಂ. ಇಓ ಫಕೀರಪ್ಪ ಚಿನ್ನನ್ನವರ, ಗೋಕಾಕ ತಾ. ಪಂ. ಇಓ ಪರಶುರಾಮ ಗಸ್ತೆ, ಸೇರಿದಂತೆ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಅಭಿಯಂತರರು ಈ ಸಭೆಯಲ್ಲಿ ಭಾಗವಹಿಸಿದ್ದರು.

