ಸಂಯುಕ್ತ ಟೈಮ್ಸ್, ದಾವಣಗೆರೆ: ಕೇಂದ್ರ ಸರ್ಕಾರ ಪ್ರತಿ ಮನೆಗೂ ನೀರು ತಲುಪಿಸಲು `ಹರ್ ಘರ್ ಜಲ್’ ಎಂಬ ಯೋಜನೆ ಆರಂಭಿಸಿದ್ದು ಇದಕ್ಕಾಗಿ ಕೋಟ್ಯಂತರ ರೂ. ಹಣ ವ್ಯಯಮಾಡಿದೆ. ಈ ಯೋಜನೆಯ ಹಣದಲ್ಲಿ ಅಧಿಕಾರಿಗಳು, ಗುತ್ತಿಗೆದಾರರು 81 ಲಕ್ಷ ರೂ. ಲೂಟಿ ಹೊಡೆದ ಆರೋಪ ದಾವಣಗೆರೆಯ ಅಲೂರು ಹಟ್ಟಿ ಗ್ರಾಮದಲ್ಲಿ ಕೇಳಿಬಂದಿದೆ.

ಈ ಗ್ರಾಮದಲ್ಲಿ ಮನೆ ಮನೆಗೆ ಗಂಗೆ ಯೋಜನೆ ಕಾಮಗಾರಿ ನಡೆದಿದೆ. ಇಲ್ಲಿಯವರೆಗೂ ನೀರು ಒಂದು ದಿನವೂ ಬಂದಿಲ್ಲ. ಕಳಪೆ ಗುಣಮಟ್ಟದ ನಲ್ಲಿಗಳು, ಮೋಟರ್ಗಳನ್ನು ಅಳವಡಿಕೆ ಮಾಡಲಾಗಿದೆ. ಕಾಮಗಾರಿ ನಡೆದ ಕೆಲವೇ ದಿನಗಳಲ್ಲಿ ಇವು ಕಿತ್ತು ಬಂದಿವೆ.
ಈ ಗ್ರಾಮದಲ್ಲಿ 2020-21 ಸಾಲಿನ ಜಲ ಜೀವನ್ ಮಿಷನ್ ಅಡಿಯಲ್ಲಿ 81 ಲಕ್ಷ ರೂ. ಹಣ ಬಿಡುಗಡೆಯಾಗಿತ್ತು. ಗುತ್ತಿಗೆದಾರ ಗುಂಡಗತ್ತಿ ಎಂಬವರಿಗೆ ಟೆಂಡರ್ ಆಗಿ, ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇದನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಲಾಗುತ್ತಿಲ್ಲ.
ಸರ್ಕಾರದ ಯೋಜನೆ ಅಂದ್ರೆ ಬಹುತೇಕರಲ್ಲಿ ಇದೇ ರೀತಿ ಅಸಡ್ಡೆ ಇರುತ್ತದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರರ ಮತ್ತು ಅಧಿಕಾರಿಗಳು, ಜನ ಪ್ರತಿನಿಧಿಗಳು ಶಾಮೀಲಾಗಿ ಕೊಳ್ಳೆ ಹೊಡೆದಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

