Spread the love

ಸಂಯುಕ್ತ ಟೈಮ್ಸ್, ಗೋಕಾಕ: ಸ್ಕೂಲ ಬ್ಯಾಗ ತಂದು ಕೊಡಲು ನಿರಾಕರಿಸಿದ ವಿದ್ಯಾರ್ಥಿಯೊಬ್ಬನಿಗೆ ಆತನ ಮೂವರು ಸಹಪಾಠಿಗಳು ಚಾಕುವಿನಿಂದ ಇರಿದ ಘಟನೆ ಗೋಕಾಕ ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ನಡೆದಿದೆ.

ಗಾಯಾಳುವನ್ನು 10ನೇ ತರಗತಿ ವಿದ್ಯಾರ್ಥಿ ಪ್ರದೀಪ ಬಂಡಿವಡ್ಡರ (15) ಎಂದು ಗುರುತಿಸಲಾಗಿದೆ. ಶಾಲೆ ಮುಗಿದ ಬಳಿಕ ನಗರದ ವಾಲ್ಮೀಕಿ ಮೈದಾನಕ್ಕೆ ಬಂದಿದ್ದ 10ನೇ ತರಗತಿ ವಿದ್ಯಾರ್ಥಿಗಳಾದ ರವಿ ಚಿನ್ನವ್ವ, ಅಶೋಕ್ ಕಂಕಣವಾಡಿ, ಸಿದ್ದಾರ್ಥ ಮಟ್ಟಿಕೊಪ್ಪ ಅವರು ಸಹಪಾಠಿ ಪ್ರದೀಪ ಬಂಡಿವಡ್ಡರಗೆ ತರಗತಿಯಲ್ಲಿದ್ದ ಬ್ಯಾಗ್ ತರುವಂತೆ ತಿಳಿಸಿದ್ದಾರೆ, ಇದಕ್ಕೆ ಪ್ರದೀಪ್ ನಿರಾಕರಿಸಿದ್ದು, ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಮೂವರು ಪ್ರದೀಪ ಕುತ್ತಿಗೆ, ಕೈ ಮತ್ತು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ನರಳಾಡುತಿದ್ದ ಪ್ರದೀಪನನ್ನು ಸ್ಥಳೀಯ ಶಿಕ್ಷಕರು ಗೋಕಾಕನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಗರ ಪೊಲೀಸರು ಆಸ್ಪತ್ರೆಗೆ ದೌಢಾಯಿಸಿ ಹಲ್ಲೆಗೊಳಗಾದವನಿಂದ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಇದೀಗ ಬಲೆ ಬೀಸಿದ್ದು, ಈ ಸಂಬಂಧ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!