ಸಂಯುಕ್ತ ಟೈಮ್ಸ್, ಗದಗ: ಜೋಡಿ ಕೊಲೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ಅನ್ಯ ಜಾತಿಯ ರಮೇಶ ಮಾದರ ಮತ್ತು ಗಂಗಮ್ಮ ಅವರು ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬಸ್ಥರ ವಿರೋಧ ನಡುವೆ ಗಂಗಮ್ಮ ಪ್ರೀತಿಸಿ ಅಂತರಜಾತಿ ವಿವಾಹ ಆಗಿದ್ದಕ್ಕೆ ಗಂಗಮ್ಮ ಸಂಬಂಧಿಕರು ಕೊಲೆ ಮಾಡಿದ್ದರು.
2019 ರಲ್ಲಿ ಗಂಗಮ್ಮ ಸಂಬಂಧಿಕರು ಲಕ್ಕಲಕಟ್ಟಿ ಗ್ರಾಮದಲ್ಲಿ ರಮೇಶ ಮಾದರ ಹಾಗೂ ಗಂಗಮ್ಮಳನ್ನು ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ್ ರಾಠೋಡ ಹಾಗೂ ಬಸಡ್ರೈವರ್ ಆಗಿದ್ದ ಪರಶುರಾಮ ರಾಠೋಡ್ ಮೇಲೆ ಐಪಿಸಿ ಸೆಕ್ಷನ್ 427, 449, 302, 506(2) ಸೇರಿದಂತೆ ವಿವಿಧ ಸೆಕ್ಷನ ಅಡಿಯಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆ ವೇಳೆ ನಾಲ್ವರ ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.

