ಬೆಳಗಾವಿ: SC ಜಾತಿಗೆ ಸೇರಿದ ನಾಗರಾಜ ಭಜಂತ್ರಿಯನ್ನು ಅವಾಚ್ಯವಾಗಿ ಜಾತಿಯನ್ನು ನಿಂದಿಸಿ, ಅಮಾನುಷವಾಗಿ ಕೊಡಲಿಯಿಂದ ಕೊಚ್ಚಿ ಮತ್ತು ಕಬ್ಬಿಣದ ರಾಡನಿಂದ ಬರ್ಬರವಾಗಿ ಕೊಲೆಗೈದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಜೊತೆಗೆ 28 ಸಾವಿರ ದಂಡವನ್ನು ಬೆಳಗಾವಿಯ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.

ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮದ ಮಹಾಂತೇಶ ಚನ್ನಪ್ಪಗೌಡ ಪಾಟೀಲ ಮತ್ತು ಶಿವಯ್ಯ ಮಲ್ಲಯ್ಯ ಹಿರೇಮಠ ಜೀವಾವಧಿ ಶಿಕ್ಷೆಗೆ ಒಳಗಾದವರು.
ಸುರೇಬಾನ ಗ್ರಾಮದ ಕೊಲೆ ಆರೋಪಿ ಮಹಾಂತೇಶ ಚನ್ನಪ್ಪಗೌಡ ಪಾಟೀಲ ಅವರ ಹೆಂಡತಿಯನ್ನು ಮನೆ ಮುಂದೆ ರಂಗೋಲಿ ಹಾಕುವಾಗ ನಾಗರಾಜ ಭಜಂತ್ರಿಯು ಕೆಟ್ಟ ದೃಷ್ಟಿಯಿಂದ ನೋಡಿ ಅಸಹ್ಯವಾಗಿ ಮಾತನಾಡಿದ್ದ ಎಂಬ ಕಾರಣಕ್ಕಾಗಿ ಈ ಕೊಲೆ ನಡೆದಿತ್ತು ಎಂದು ತಿಳಿದುಬಂದಿದೆ.
ದಿನಾಂಕ: 13-04- 2019 ರಂದು ಸುರೇಬಾನ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸದರಿ ಕೊಲೆ ಪ್ರಕರಣದ ತನಿಖೆಯನ್ನು ಆಗಿನ ರಾಮದುರ್ಗ ಉಪ-ವಿಭಾಗದ DySP ಮತ್ತು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾದ ಬಿ. ಎಸ್. ಪಾಟೀಲ ಅವರು ತನಿಖೆಯನ್ನು ನಡೆಸಿ ಚಾರ್ಜ್ ಶೀಟ್ ಅನ್ನು ಕೋರ್ಟಗೆ ಸಲ್ಲಿಸಿದ್ದರು.
ಸದರಿ ಪ್ರಕರಣದ ಕುರಿತು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಆರ್. ಜಿ. ದೇವರಡ್ಡಿ ಅವರು ಸುದೀರ್ಘವಾದ ವಾದವನ್ನು ಮಂಡಿಸಿರುತ್ತಾರೆ.

