Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಬಳ್ಳಾರಿ ಬಳಿಕ ಬೆಳಗಾವಿ ಬಾಣಂತಿಯರ ಮತ್ತು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ನಡೆಸಿ ವರದಿ ನೀಡಲು ಒಂದು ವಾರಗಳ ಡೆಡ್‌ಲೈನ್ ನೀಡಲಾಗಿದೆ.

ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ತಿಂಗಳಲ್ಲಿ ಬಾಣಂತಿಯರ, ಗರ್ಭಿಣಿಯರು, ಮಕ್ಕಳ ಸಾವು ಯಾವ ಕಾರಣಕ್ಕೆ ಆಗಿದೆ ಎಂದು ನೋಡುತ್ತಿದ್ದೇವೆ. ಬಳ್ಳಾರಿಯಲ್ಲಿ ನಡೆದ ಘಟನೆಯ ಸಮಗ್ರ ವರದಿಯನ್ನು ಕೇಳಿದ್ದೇವೆ. IV Fluidನಿಂದ ಆಗಿರಬಹುದು ಎಂದು ಕಂಪನಿ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದ್ದೇವೆ ಎಂದರು.

ಪೌಷ್ಠಿಕಾಂಶದ ಕೊರತೆಯಿಂದ ಮಕ್ಕಳ ಸಾವಾಗಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ಪೌಷ್ಠಿಕಾಂಶದ ವಿಚಾರವಾಗಿ ನಮ್ಮ ಇಲಾಖೆ ಆರೋಗ್ಯ ಇಲಾಖೆ ಜಂಟಿಯಾಗಿ ಪ್ರೋಟಿನ್ ಸಂಬಂಧ ಮೂರು ತಿಂಗಳ ಗರ್ಭಿಣಿ ಇದ್ದಾಗಿನಿಂದ ನೋಡುತ್ತಿದ್ದೇವೆ. ಬರೀ ಪೌಷ್ಠಿಕಾಂಶದಿಂದ ಸಾವಾಗಿದೆ ಎಂದು ಹೇಳಲು ಆಗಲ್ಲ. ಬೇರೆ ಕಾರಣ ಇರಬಹುದು. ಒಂದು ವಾರದ ಗಡುವು ಕೊಟ್ಟು ತನಿಖೆ ನಡೆಸಿ ವರದಿ ಕೊಡುವಂತೆ ಹೇಳುತ್ತೇವೆ. ಬೆಳಗಾವಿಯಲ್ಲಿ ಸಾವಿನ ಕುರಿತು ಕೂಡ ವರದಿ ಕೊಡುವಂತೆ ಕೇಳುತ್ತೇನೆ ಎಂದು ಹೇಳಿದರು.

ಪೌಷ್ಠಿಕ ಆಹಾರ ನೀಡುವಲ್ಲಿ ಯತ್ನಾಳ್ ಭ್ರಷ್ಟಾಚಾರ ಆರೋಪ ಹೊರಿಸಿದ ಕುರಿತು ಮಾತನಾಡಿ, ಸದನದಲ್ಲಿ ಹತ್ತು ಸಾರಿ ಚರ್ಚೆ ಆಗಿದೆ. ನಾವೇನು ಹೊಸದು ಮಾಡಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ಮಾಡುತ್ತಿದ್ದೇವೆ. ಬಿಜೆಪಿ ಅವಧಿಯಲ್ಲಿ ಈ ರೀತಿ ಆಗಿದೆ. 70,000 ಅಂಗನವಾಡಿಯಲ್ಲಿ ಏನೂ ದುರ್ಘಟನೆ ಆಗಿಲ್ಲ. ದೇವರ ಆಶೀರ್ವಾದದಿಂದ ಯಾವ ಮಕ್ಕಳ ಆರೋಗ್ಯ ಸಮಸ್ಯೆ ಆಗಿಲ್ಲ. ಎಲ್ಲಿಯಾದರೂ ಘಟನೆ ಆದರೆ, ಕಳಪೆ ಆಹಾರ ಏನಾದರೂ ಬಂದರೆ ನಮ್ಮ ಗಮನಕ್ಕೆ ತನ್ನಿ, ಸರಿಪಡಿಸುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You missed

error: Content is protected !!