ಸಂಯುಕ್ತ ಟೈಮ್ಸ್, ಮಡಿಕೇರಿ: ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಶಿಕ್ಷೆ ವಿಧಿಸಿದ್ದ ನ್ಯಾಯಾಲಯವೇ, `ಪೊಲೀಸರು ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆತ ತಪ್ಪು ಮಾಡಿಲ್ಲ’ ಎಂದು ಸ್ಪಷ್ಟಪಡಿಸಿ ನಿರಪರಾಧಿ ಎಂದು ಘೋಷಿಸಿದೆ. ತಪ್ಪು ಮಾಡದೇ 2 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿ ಇದೀಗ ನ್ಯಾಯ ದೊರಕಿಸಿಕೊಟ್ಟ ವಕೀಲರಿಗೂ ಹಾಗೂ ನ್ಯಾಯಾಧೀಶರಿಗೂ ಕೃತ್ಯಜ್ಞತೆ ಸಲ್ಲಿಸಿದ್ದಾರೆ.

ಪ್ರಕರಣದ ಹಿನ್ನಲೆ:
4 ವರ್ಷದ ಹಿಂದೆ, ಮೈಸೂರು ಜಿಲ್ಲೆಯ ಬೆಟ್ಟದಪುರದ ಶಾನುಭೋಗನಹಳ್ಳಿಯಲ್ಲಿ ಮಹಿಳೆಯ ಶವವು ಪತ್ತೆಯಾಗಿತ್ತು. ಮೃತ ಮಹಿಳೆಯನ್ನು ಕೊಡಗಿನ ಕುಶಾಲನಗರದ ನಿವಾಸಿ ಮಲ್ಲಿಗೆ ಎಂದು ಗುರುತಿಸಲಾಗಿತ್ತು. ಆ ಮಹಿಳೆಯನ್ನು ಆಕೆಯ ಗಂಡ ಸುರೇಶ್ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಬೆಟ್ಟದಪುರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.
ಏ. 1ರಂದು ಮಹಿಳೆಯು ಆಕೆಯ ಪ್ರಿಯತಮ ಗಣೇಶನೊಂದಿಗೆ ಮಡಿಕೇರಿ ನಗರದಲ್ಲೇ ಪತ್ತೆಯಾದ ಬಳಿಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಮೈಸೂರಿನ 5ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಪೊಲೀಸ್ ತನಿಖಾಧಿಕಾರಿಗಳ ಕರ್ತವ್ಯ ಲೋಪವನ್ನು ಎತ್ತಿಹಿಡಿದು, ಏ.23ಕ್ಕೆ ಆದೇಶ ಕಾಯ್ದಿರಿಸಿತ್ತು. ಬುಧವಾರ ಈ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯ ಕೊಲೆ ಮಾಡದೇ 2 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಸುರೇಶ್ ಎಂಬುವವರನ್ನು ನಿರಪರಾಧಿ ಎಂದು ಘೋಷಣೆ ಮಾಡಿ ಗೌರವಯುತವಾಗಿ ಬಿಡುಗಡೆ ಮಾಡಿದೆ.
ಈ ಕೊಲೆ ಆರೋಪದಲ್ಲಿ ಜೈಲುವಾಸ ಅನುಭವಿಸಿದ್ದ ಕುಶಾಲನಗರದ ಬಸವನಹಳ್ಳಿ ನಿವಾಸಿ ಸುರೇಶ್ ಅವರನ್ನು ನಿರಪರಾಧಿ ಎಂದು ಘೋಷಿಸುತ್ತಿದ್ದಂತೆ ಕುಟುಂಬಸ್ಥರು ಕಣ್ಣಿರು ಹಾಕಿದರು. ಪ್ರಕರಣ ಸಂಬಂಧ, ಪೊಲೀಸ್ ದಾಖಲೆಗಳಿಂದ ಅವರ ಹೆಸರನ್ನು ತೆಗೆದು ಹಾಕುವಂತೆ ಬೆಟ್ಟದಪುರ ಪೊಲೀಸರಿಗೆ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಸೂಚನೆ ನೀಡಿದರು. ಆರೋಪಿಯ ಜಾಮೀನು ಬಾಂಡ್ ಮತ್ತು ಅವರ ಶೂರಿಟಿ ಬಾಂಡ್ ಅನ್ನು ರದ್ದುಗೊಳಿಸಲಾಗಿದೆ. ಅವರಿಗೆ 1 ಲಕ್ಷ ಪರಿಹಾರ ನೀಡುವಂತೆ ಸರ್ಕಾರದ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಂದಿನ ಬೈಲಕುಪ್ಪೆ CPI ಬಿ.ಜಿ.ಪ್ರಕಾಶ್ ವಿರುದ್ಧ ಐಪಿಸಿ ಸೆಕ್ಷನ್ 193, 195ರ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ಸೂಚಿಸಿದ್ದಾರೆ. ಅಲ್ಲದೇ ತನಿಖಾ ತಂಡದಲ್ಲಿದ್ದ ಅಂದಿನ ಪ್ರೊಬೇಷನರಿ IPS ಅಧಿಕಾರಿ ಜಿತೇಂದ್ರ ಕುಮಾರ್, ಬೆಟ್ಟದಪುರ PSI ಮಹೇಶ್ ಕುಮಾರ್, PSI ಪ್ರಕಾಶ್ ಯತ್ತಿಮನಿ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಮೈಸೂರು IGPಗೆ ಆದೇಶಿಸಿದ್ದಾರೆ. ಹಾಗೆಯೇ ಪ್ರಸ್ತುತ ಪ್ರಕರಣದಲ್ಲಿ ದಾಖಲಾದ UDR ಕುರಿತು ತನಿಖೆ ನಡೆಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.
ಬಿಡುಗಡೆ ಬಳಿಕ ಮಾತನಾಡಿರುವ ಸುರೇಶ್ ಅವರು, ತಾನು ಮಾಡದೇ ಇರುವ ತಪ್ಪಿಗೆ 2 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಯಿತು. ತಮಿಳು ಚಿತ್ರದ `ಜೈಭೀಮ್’ ಚಿತ್ರದಲ್ಲಿ ಹೇಗೆ ಪೊಲೀಸರು ಟ್ರೀಟ್ಮೆಂಟ್ ನೀಡಿದ್ರೋ ಹಾಗೇ ನನ್ನ ನಿಜ ಜೀವನದಲ್ಲಿ ಅಂತಹ ಟ್ರೀಟ್ಮೇಟ್ ಪೋಲಿಸರು ಕೊಟ್ಟಿದ್ದಾರೆ. ಕರೆಂಟ್ ಶಾಕ್, ಹಗ್ಗದಲ್ಲಿ ಕಟ್ಟಿ ಹಾಕಿ ಮಾಡದೇ ಇರುವ ಕೊಲೆಯನ್ನು ತನ್ನ ತಲೆಯ ಮೇಲೆ ಹಾಕಿದರು. ಗೊತ್ತಿಲ್ಲದ ಸ್ಥಳದಲ್ಲಿ ಮಹಜರು ಮಾಡಿದರು. ನನಗೆ ಶಿಕ್ಷೆ ಕೊಟ್ಟ ಹಾಗೆ ಬಡವರ್ಗದ ಹಲವು ಜನರಿಗೂ ಶಿಕ್ಷೆ ನೀಡಿ ಮಾಡದೇ ಇರುವ ತಪ್ಪುಗಳನ್ನು ಬೇರೆ ಯಾರೋ ಮೇಲೆ ಕೇಸ್ ಹಾಕಿದ್ದಾರೋ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಲ್ಲದೇ ತನ್ನ ಪರ ನ್ಯಾಯಾಲಯದಲ್ಲಿ ವಕೀಲರಾದ ಪಾಡು ಪೂಜಾರಿ ಅವರು ವಾದ ಮಾಡಿ ತನ್ನ ಬಳಿ 1 ರೂ. ಹಣವನ್ನೂ ಪಡೆಯದೇ ತನಗೆ ನ್ಯಾಯ ಕೊಡಿಸಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.
ಪತ್ನಿ ನಾಪತ್ತೆ ಆಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿ, ನನ್ನನ್ನೇ ಕೊಲೆ ಆರೋಪಿಯನ್ನಾಗಿ ಮಾಡಿದ್ದರು. ಮಾಡದ ತಪ್ಪಿಗೆ 2 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದ ಪೋಲಿಸರಿಗೆ ತಕ್ಕ ಶಿಕ್ಷೆ ಆಗುತ್ತದೆ ಅನ್ನೋ ನಿರೀಕ್ಷೆಯಲ್ಲಿ ಸುರೇಶ್ ಇದ್ದಾರೆ.

