Spread the love

ಸಂಯುಕ್ತ ಟೈಮ್ಸ್, ಅಥಣಿ: ದೂರು ಕೊಡಲು ಪೊಲೀಸ್ ಠಾಣೆಗೆ ಬಂದ ದಲಿತ ಯುವತಿಯೊಬ್ಬಳಿಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ DySP ಪ್ರಶಾಂತ್ ಮುನ್ನೋಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್‌ ವಿರುದ್ಧ FIR ದಾಖಲಾಗಿದೆ.

ಅಥಣಿ ಪಟ್ಟಣದ ಆಸ್ಪತ್ರೆಯೊಂದರ ವೈದ್ಯರಾಗಿರುವ ಸಾಗರ ಭಾವಿ ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಳೆದ ಆರು ತಿಂಗಳಿಂದ ನಿರಂತರ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ, ಕೊನೆಗೆ ಮದುವೆಯಾಗುವುದಿಲ್ಲವೆಂದು ಹೇಳಿದ್ದಾನೆ ಎಂದು ಆರೋಪಿಸಿ ಯುವತಿಯು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರು ನೀಡಿದ ಬಳಿಕ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ DySP ಕಚೇರಿಗೆ ಹೋದಾಗ ಪ್ರಶಾಂತ್ ಮುನ್ನೋಳ್ಳಿ ಮತ್ತು ಪೊಲೀಸ್ ಪೇದೆ ಸದಾಶಿವ ಪಾಟೀಲ್ ಜಾತಿ ನಿಂದನೆ ಮಾಡಿ ಯುವತಿಯನ್ನು ಠಾಣೆಯಿಂದ ಹೊರಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ನೊಂದ ಯುವತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಕುರಿತು ವಿವರಿಸಿದಾಗ DySP ಮತ್ತು ಪೊಲೀಸ್ ಪೇದೆ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!