Spread the love

ಸಂಯುಕ್ತ ಟೈಮ್ಸ್, ಕಲಬುರಗಿ: ಕಪ್ಪು ಪಟ್ಟಿಯಿಂದ ಹೆಸರನ್ನು ಕೈಬಿಡಲು ಅರ್ಜಿದಾರರಿಂದ 1 ಲಕ್ಷ ಲಂಚ ಪಡೆದ ಆರೋಪದಡಿ ಕಲಬುರಗಿ ಪೀಠದ ಮಾಹಿತಿ ಆಯೋಗದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

“ಕಲಬುರಗಿ ಕಲರವ’ ಮಾಸ ಪತ್ರಿಕೆ ಸಂಪಾದಕ ಸಾಯಿಬಣ್ಣ ನಾಸಿ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಾಯಿಬಣ್ಣ ಅವರು RTI ಅಡಿ 117 ಅರ್ಜಿಗಳನ್ನು ಸಲ್ಲಿಸಿದ್ದರು. ವೈಯಕ್ತಿಕ ಹಿತಾಸಕ್ತಿಗಾಗಿ ಮಾಹಿತಿ ಕೇಳಿದ್ದಾರೆ ಎಂದು ಏಕಪಕ್ಷೀಯವಾಗಿ ತೀರ್ಮಾನಿಸಿದ್ದ ಆಯುಕ್ತರು, 117 ಅರ್ಜಿಗಳನ್ನು ವಜಾಗೊಳಿಸಿದ್ದರು. ಜತೆಗೆ ಸಾಯಿಬಣ್ಣ ಅವರ ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲು ಸೂಚಿಸಿದ್ದರು. ಒಂದು ಅರ್ಜಿಗೆ ಮಾತ್ರ ‍1,000 ದಂಡ ವಿಧಿಸಿದ್ದರು. ಉಳಿದ 116 ಅರ್ಜಿಗಳ ಮೇಲ್ಮನವಿ ವಿಚಾರಣೆಯ ಆದೇಶ ಪ್ರತಿ ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ 

ಸಾಯಿಬಣ್ಣ ಅವರ ಹೆಸರನ್ನು ಕಪ್ಪು ಪಟ್ಟಿಯಿಂದ ಕೈಬಿಡಲು ಡಾಕಪ್ಪ ಅವರು ‍3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡಾಕಪ್ಪ ಅವರು ಗುರುವಾರ ಲಂಚದ ಹಣ 1 ಲಕ್ಷವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್, ಡಿವೈಎಸ್ಪಿ ಗೀತಾ ಬೇನಾಳ, ಪೊಲೀಸ್ ಇನ್‌ಸ್ಪೆಕ್ಟರ್ ಅರುಣಕುಮಾರ್, ಸಿಬ್ಬಂದಿ ಮಲ್ಲಿನಾಥ, ಹನುಮಂತ, ಬಸವರಾಜ ದಾಳಿಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You missed

error: Content is protected !!