Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ವಿಧಾನ ಪರಿಷತ್‌ನಲ್ಲಿ ಗುರುವಾರ ಅಶ್ಲೀಲ ಪದಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ FIR ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.

ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿ.ಟಿ.ರವಿ ಅವರನ್ನು ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಂಧನ ಖಂಡಿಸಿ ಪೊಲೀಸ್ ವ್ಯಾನ್ ಹತ್ತಿ ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.

ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ನೀಡಿದ ದೂರಿನ್ವಯ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 75, 79ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ನೀಡಿದ್ದಾರೆ ಎನ್ನಲಾದ ಹೇಳಿಕೆ ಸಂಬಂಧ ವಿಧಾನ ಪರಿಷತ್‌ನಲ್ಲಿ ಗುರುವಾರ ಬೆಳಗ್ಗೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಿ.ಟಿ ರವಿ, ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಕುರಿತು ಅವಹೇಳನಕಾರಿ ಪದಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಪ್ರಕರಣದ ಸಂಬಂಧ ಕಾಂಗ್ರೆಸ್ ಮುಖಂಡರು ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ. ಸಿ.ಟಿ ರವಿ ಅವರನ್ನು ಸದನದಿಂದ ಅಮಾನತುಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿ.ಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವುದು ಕ್ರಿಮಿನಲ್ ಅಪರಾಧ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಮನಾದುದು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!