ಸಂಯುಕ್ತ ಟೈಮ್ಸ್, ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸುಳ್ಳುರಾಮಯ್ಯ ಎಂದು ಹೆಸರು ಬದಲಾಯಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ 40% ಕಮೀಷನ್ ವಿಚಾರವಾಗಿ ಮಾತನಾಡಿದ ಅವರು, ಪ್ರಧಾನಿಯವರಿಂದ ಸಿದ್ದರಾಮಯ್ಯ ಸಾಕ್ಷಿ ಕೇಳ್ತಾರೆ, ಅವರಿಗೆ ನಾಚಿಕೆ ಆಗಬೇಕು. ಸಿದ್ದರಾಮಯ್ಯ, ಡಿಕೆಶಿ, ಅಂಬಿಕಾಪತಿ ಈ ಸುಳ್ಳಿನ ಮಹಲ್ ಕಟ್ಟಿದ್ದರು ಅದು ಈಗ ಕುಸಿದು ಬಿದ್ದಿದೆ. ರಾಜ್ಯದ ಜನತೆಗೆ ಸುಳ್ಳು ಹೇಳಿ, ತಾವು ಸುಳ್ಳುರಾಮಯ್ಯ ಎಂದು ಖುದ್ದು ಸಿಎಂ ಸಾಬೀತು ಪಡಿಸಿದ್ದಾರೆ. ತಪ್ಪು ಮಾಡಿಲ್ಲ ಎಂದು ಸೈಟು ವಾಪಸ್ ಕೊಟ್ಟರು. ಈಗ ಅವರು ಮಾಡಿದ 40% ಕಮೀಷನ್ ಆರೋಪವೂ ಸುಳ್ಳಾಗಿದೆ. ಇನ್ಮುಂದೆ ಸಿದ್ದರಾಮಯ್ಯ ತಮ್ಮ ಹೆಸರನ್ನು ಸುಳ್ಳು ರಾಮಯ್ಯ ಎಂದು ಬದಲಾಯಿಸಿಕೊಳ್ಳಲಿ ಎಂದರು.
ನಾನು ಇವತ್ತಿಗೆ ಪ್ರತಿಪಕ್ಷ ನಾಯಕನಾಗಿ ಒಂದು ವರ್ಷವಾಗಿದೆ. ಹಾಗೇ ಇದೇ ಹೊತ್ತಿನಲ್ಲಿ ನಮ್ಮ ಸರ್ಕಾರದ ಮೇಲಿನ 40% ಕಮೀಷನ್ ಆರೋಪ ಸುಳ್ಳು ಎನ್ನುವುದು ಸಾಬೀತಾಗಿದೆ. ಕಮೀಷನ್ ಆರೋಪ ಮಾಡಿರುವುದು ಕಾಂಗ್ರೆಸ್ನ ಟೂಲ್ಕಿಟ್ನ ಭಾಗವಾಗಿದೆ. ಇದುವರೆಗೆ 40% ಕಮೀಷನ್ ಆರೋಪಕ್ಕೆ ಕಾಂಗೆಸ್ನವರು ದಾಖಲೆ ಕೊಟ್ಟಿಲ್ಲ. ಆಧಾರರಹಿತ, ಸುಳ್ಳು ಆರೋಪ ಮಾಡಿದ್ದರು. ನಮ್ಮ ಮೇಲಿನ ಆರೋಪ ಸುಳ್ಳು ಎಂದು ಲೋಕಾಯುಕ್ತ ತನಿಖೆಯಿಂದಲೇ ಗೊತ್ತಾಗಿದೆ. ಈಗಿನ ಕಾಂಗ್ರೆಸ್ ಸರ್ಕಾರ 60% ಕಮೀಷನ್ ಸರ್ಕಾರ ಆಗಿದೆ ಎಂದು ಕಿಡಿಕಾರಿದ್ದಾರೆ.

