ಸಂಯುಕ್ತ ಟೈಮ್ಸ್, ಕಲಬುರಗಿ: ಗ್ರಾಮ ಪಂಚಾಯಿತಿ ಸಿಬ್ಬಂದಿಯಾಗಿದ್ದ ಗುರುಸಿದ್ದಯ್ಯ ಅವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಮತ್ತು 6 ತಿಂಗಳ ವೇತನ ಮಾಡಲು ಫೋನ್ ಪೇ ಮೂಲಕ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದು ನ್ಯಾಯಾಂಗ ಬಂಧನಕ್ಕೊಳಗಾಗಿರುವ ಕಲಬುರಗಿ ತಾಲೂಕಿನ ಕವಲಗಾ (ಬಿ) ಗ್ರಾಮ ಪಂಚಾಯತಿಯ ಪಿಡಿಒ ಪ್ರೀತಿರಾಜ್ ಅವರನ್ನು ಅಮಾನತ್ತುಗೊಳಿಸಿ ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆ.

ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957ರ ನಿಯಮ 10(1)(ಡಿ) ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರಸ್ಥಾನ ಬಿಟ್ಟು ಬೇರೆಲ್ಲೂ ತೆರಳುವಂತಿಲ್ಲ. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ-1957ರ ನಿಯಮ 98ರ ಅನುಸಾರ ಜೀವನ ನಿರ್ವಹಣೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

