ಸಂಯುಕ್ತ ಟೈಮ್ಸ್, ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಮುಖ್ಯಮಂತ್ರಿ ಮಾತ್ರವಲ್ಲ ಇಡೀ ಸರ್ಕಾರ ರಾಜೀನಾಮೆ ಕೊಟ್ಟರೆ ಮಾತ್ರ ಜನತೆಗೆ ಶಾಂತಿ-ನೆಮ್ಮದಿಯ ಭರವಸೆ ಲಭಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಬಾಂಬ್ ಬ್ಲಾಸ್ಟ್ ಆಗಬೇಕು? ಈ ಸರ್ಕಾರ ಯಾಕೆ ಕಣ್ಮುಚ್ಚಿ ಕುಳಿತಿದೆ? ಯಾರನ್ನು ಓಲೈಸುತ್ತಿದೆ? FSL ವರದಿ ಬಿಡುಗಡೆ ಮಾಡದೇ ಇರಲು ಸರ್ಕಾರದ ಮೇಲೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರ ಒತ್ತಡ ಇದೆಯೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಮನಸ್ಸನ್ನು ಪೂರ್ತಿ ಕಲ್ಮಶ ಮಾಡುವ ಕಡೆಗೆ ಹೋಗುತ್ತಿದೆ ಎಂದು ಆರೋಪಿಸಿದರು. ಕೆಂಗಲ್ ಹನುಮಂತಯ್ಯನವರು ಕಟ್ಟಿಸಿದ ವಿಧಾನಸೌಧ ರಾಜ್ಯದ ಹೃದಯವಿದ್ದಂತೆ. ಅಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದು ಅಕ್ಷಮ್ಯ ಎಂದು ತಿಳಿಸಿದರು.
ಅಲ್ಪಸಂಖ್ಯಾತರು ತಮಗೆ ಮತ ಹಾಕಿದರೆ ಸಾಕು, ಬಹುಸಂಖ್ಯಾತರನ್ನು ಬಗ್ಗು ಬಡಿಯುತ್ತೇವೆ ಎಂಬ ನೀತಿ ಕಾಂಗ್ರೆಸ್ ಪಕ್ಷದ್ದು. ನೀವೇನಾದರೂ ಮಾಡಿ; ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಗಲಭೆ ಮಾಡಿ. ಮೈಸೂರಿನಲ್ಲಿ ಅವರ ಶಾಸಕರ ಹತ್ಯೆ ಪ್ರಯತ್ನ ಮಾಡಿದರೂ ಏನೂ ಮಾಡುವುದಿಲ್ಲ ಎಂಬ ಕರ್ನಾಟಕದ ಕಾಂಗ್ರೆಸ್ ಮನಸ್ಥಿತಿ ಗಂಡಾಂತರ ತರುವಂತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದಕರೆಂಬ ಇಲಿಗಳು ಬಿಲದಿಂದ ಹೊರ ಬಂದು ಹುಲಿಗಳಾಗಿವೆ. ನಮ್ಮನ್ನೇನೂ ಮಾಡುವುದಿಲ್ಲ ಎಂಬ ಮನಸ್ಥಿತಿ ಭಯೋತ್ಪಾದಕರದ್ದಾಗಿದೆ. ಇದು ದೊಡ್ಡ ಆಘಾತ ತಂದಿದೆ ಎಂದು ವಿವರಿಸಿದರು.
ಸರ್ಕಾರ ಅವರ ಬಗ್ಗೆ ಸಹಾನುಭೂತಿ ತೋರುವುದು ಆಘಾತಕಾರಿ ವಿಚಾರ. ರಾಜ್ಯ ಸರ್ಕಾರ ಕೋಮುವಾದದ ಕಡೆ ವಾಲುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆಯ ಪ್ರವೃತ್ತಿ ಮುಂದುವರೆದಿದೆ. ಅಲ್ಪಸಂಖ್ಯಾತರ ಬಗ್ಗೆ ಬರುವ ವಿಷಯಗಳನ್ನು ಕಾಂಗ್ರೆಸ್ಸಿಗರು ನಿರಂತರವಾಗಿ ಮುಚ್ಚಿಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಬಾಂಬ್ ಸ್ಫೋಟದ ಆರೋಪಿಗಳನ್ನು ಅಮಾಯಕರು, ಮೈ ಬ್ರದರ್ಸ್ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಕೆಲದಿನಗಳ ಹಿಂದೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ‘ಆ ರೀತಿ ಹೇಳಿಲ್ಲ. ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಫಾರೆನ್ಸಿಕ್ ವರದಿಯಲ್ಲಿ ಹಾಗೆ ಆಗಿಲ್ಲ ಎಂದು ಬರಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮಾಧ್ಯಮಗಳು ಘೋಷಣೆ ಕೂಗಿದ್ದು ನಿಜ ಎಂದು ಪ್ರಕಟಿಸಿದರೂ ಕಾಂಗ್ರೆಸ್ನವರು ಅದನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಆಗಿದೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್ ಹೋಗಿ, ‘ಇದು ಬಿಸಿನೆಸ್ ರೈವಲ್ರಿ; ತಿಂಡಿ ವಿಚಾರದದಲ್ಲಿ ಒಳಜಗಳ’ ಎಂದಿದ್ದರು. ಈಗ ಅದು ಭಯೋತ್ಪಾದಕರ ಕೃತ್ಯ ಎಂದು ಗೊತ್ತಾಗಿದೆ. ಆದರೂ ಅದನ್ನು ಮುಚ್ಚಿಡುತ್ತಿದ್ದಾರೆ ಎಂದು ಟೀಕಿಸಿದರು.

