Spread the love

ಸಂಯುಕ್ತ ಟೈಮ್ಸ್, ನವದೆಹಲಿ:  ಚುನಾವಣೆಗೆ ಮುಂಚಿತವಾಗಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವ ಪದ್ಧತಿಯಿಂದ ನಾವು ʻಪರಾವಲಂಬಿಗಳ ವರ್ಗʼ ಸೃಷ್ಟಿಸುತ್ತಿಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ನಗರ ಪ್ರದೇಶಗಳಲ್ಲಿ ನಿರಾಶ್ರಿತ ವ್ಯಕ್ತಿಗಳ ಆಶ್ರಯ ಹಕ್ಕಿನ ಕುರಿತಾದ ವಿಷಯವನ್ನು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಎ.ಜಿ. ಮಸಿಹ್ ಅವರಿದ್ದ ದ್ವಿಸದಸ್ಯ ಪೀಠ ಆಲಿಸಿತು. ಈ ವೇಳೆ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಯ ಭಾಗವಾಗಲು ಉತ್ತೇಜಿಸುವ ಬದಲು, ನಾವು ಪರಾವಲಂಬಿಗಳ ವರ್ಗವನ್ನು ಸೃಷ್ಟಿಸುತ್ತಿಲ್ಲವೇ ಎಂದು ಪ್ರಶ್ನಿಸಿತು.

ಮಹಾರಾಷ್ಟ್ರದ ‘ಲಡ್ಕಿ ಬಹಿನ್’ ಯೋಜನೆಯನ್ನು ಉಲ್ಲೇಖಿಸಿ, ಇದರ ಅಡಿಯಲ್ಲಿ ವಾರ್ಷಿಕ ಕುಟುಂಬ ಆದಾಯ 2.5 ಲಕ್ಷ ರೂ.ಗಿಂತ ಕಡಿಮೆ ಮತ್ತು ಇತರ ರಾಜ್ಯಗಳಲ್ಲಿ ಆಡಳಿತ ಪಕ್ಷಗಳು ನಡೆಸುವ ಇದೇ ರೀತಿಯ ಕಾರ್ಯಕ್ರಮಗಳಿಂದ ಜನರು ಕೆಲಸ ಮಾಡಲು ಸಿದ್ಧರಿಲ್ಲ. ಅವರು ಯಾವುದೇ ಕೆಲಸ ಮಾಡದೆ ಉಚಿತ ಪಡಿತರ ಮತ್ತು ಹಣವನ್ನು ಪಡೆಯುತ್ತಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು,.

ಬಡವರ ಬಗ್ಗೆ ಸರ್ಕಾರಗಳ ಕಾಳಜಿಯನ್ನು ನಾವು ತುಂಬಾ ಪ್ರಶಂಸಿಸುತ್ತೇವೆ. ಆದರೆ ಅವರನ್ನು ಸಮಾಜದ ಮುಖ್ಯವಾಹಿನಿಯ ಭಾಗವನ್ನಾಗಿ ಮಾಡಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ನೀಡುವುದು ಉತ್ತಮವಲ್ಲವೇ ಎಂದು ಪೀಠ ಪ್ರಶ್ನಿಸಿತು.

ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಾದ ವಕೀಲ ಪ್ರಶಾಂತ್ ಭೂಷಣ್, ದೇಶದಲ್ಲಿ ಕೆಲಸ ಸಿಕ್ಕರೆ ಮಾಡಲು ಇಷ್ಟಪಡದವರು ಯಾರೂ ಇಲ್ಲ ಎಂದು ಹೇಳಿದರು. ಈ ವೇಳೆ ನ್ಯಾಯಮೂರ್ತಿ ಗವಾಯಿ ಅವರು ನಿಮಗೆ ಏಕಪಕ್ಷೀಯ ಜ್ಞಾನವಿರಬೇಕು, ನಾನು ಕೃಷಿ ಕುಟುಂಬದಿಂದ ಬಂದಿದ್ದೇನೆ. ಚುನಾವಣೆಗೆ ಸ್ವಲ್ಪ ಮೊದಲು ಮಹಾರಾಷ್ಟ್ರದಲ್ಲಿ ಘೋಷಿಸಿದ ಉಚಿತ ಕೊಡುಗೆಗಳಿಂದಾಗಿ, ರೈತರಿಗೆ ಕಾರ್ಮಿಕರೇ ಸಿಗುತ್ತಿಲ್ಲ ಎಂದು ಉದಾಹರಣೆ ನೀಡಿದರು.

ಆರು ವಾರಗಳ ನಂತರ ಈ ವಿಷಯವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

Leave a Reply

Your email address will not be published. Required fields are marked *

You missed

error: Content is protected !!