Spread the love

ಸಂಯುಕ್ತ ಟೈಮ್ಸ್, ಮೂಡಲಗಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಲಕ್ಷ್ಮೇಶ್ವರ ಸಮೀಪ ಮಾರಕಾಸ್ತ್ರಗಳಿಂದ‌ ಕೊಚ್ಚಿ ಯುವಕನನ್ನು ಬರ್ಬರ ಹತ್ಯೆ ಮಾಡಿದ ಘಟನೆ ನಡೆದಿದೆ.

ಕೊಲೆಯಾದ ದುರ್ದೈವಿ ಲಕ್ಷ್ಮೇಶ್ವರ ನಿವಾಸಿಯಾದ ಯಾಸಿನ್‌ ಮೋಮಿನ್ (28) ಎಂದು ತಿಳಿದು ಬಂದಿದೆ. ವ್ಯಕ್ತಿಯೋರ್ವ ಯಾಸಿನ್‌ ಮೋಮಿನ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಹಾಡಹಗಲೇ ಮಚ್ಚು ಹಿಡಿದು ಬಂದ ಆರೋಪಿಯು ಏಕಾಏಕಿ ಯಾಸಿನ್‌ ಮೋಮಿನ್‌ ಮೇಲೆ ದಾಳಿ ಮಾಡಿದ್ದಾನೆ. ಸಾರ್ವಜನಿಕವಾಗಿ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಯ ಪತ್ನಿಯನ್ನು ಈ ಮೃತ ಯಾಸಿನ್‌ ಮೋಮಿನ್‌ ತನ್ನ ಬೈಕ್ ಮೇಲೆ ಕರೆದೊಯ್ದುತ್ತಿದ್ದ ಎನ್ನಲಾಗಿದ್ದು, ಇದರಿಂದ ಸಿಟ್ಟಾದ ಆರೋಪಿ, ಯಾಸಿನ್ ಮೋಮಿನ್‌ ಹಾಗೂ ತನ್ನ ಪತ್ನಿ ಸೇರಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ.

ಘಟನೆಯಲ್ಲಿ ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವ್ಯಕ್ತಿಯ ಹೊಡೆತಕ್ಕೆ ಯಾಸಿನ್‌ ಮೋಮಿನ್‌ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ‌‌.

ಈ ಘಟನೆಯಿಂದ ಲಕ್ಷ್ಮೇಶ್ವರ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳೀಯರ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಕುಲಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ರಕ್ತಸಿಕ್ತವಾಗಿ ಬಿದ್ದಿದ್ದ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You missed

error: Content is protected !!