ಸಂಯುಕ್ತ ಟೈಮ್ಸ್, ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದೆ ಎಂದು ವರದಿಗಳಿಂದ ಶನಿವಾರ ತಿಳಿದುಬಂದಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು SIT ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ.
SIT ವಶದಲ್ಲಿರುವ ಈ ಇಬ್ಬರು ಅಧಿಕಾರಿಗಳು ವಿಚಾರಣೆ ವೇಳೆ ಸಚಿವರ ಹೆಸರು ಹೇಳಿದ್ದೇ ಆದರೆ, ಬಿ. ನಾಗೇಂದ್ರ ಅವರು ರಾಜೀನಾಮೆ ನೀಡುವುದು ನಿಶ್ಚಿತವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ. ನಾಗೇಂದ್ರ ಅವರಿಗೆ “ಎಸ್ಐಟಿ ಮುಂದೆ ನಿಮ್ಮ ಹೆಸರು ಪ್ರಸ್ತಾಪವಾದರೆ ರಾಜೀನಾಮೆ ಪಡೆಯುವುದಾಗಿ” ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿಸಿವೆ. ಹೀಗಾಗಿ ಸಚಿವ ನಾಗೇಂದ್ರ ಅವರಿಗೆ ಈ ಇಬ್ಬರು ಅಧಿಕಾರಿಗಳು ತಲೆ ನೋವಾಗಿ ಪರಣಮಿಸಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದ್ದು, ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ನೋಟ್ ನಲ್ಲಿ ಸಚಿವರ ಮೌಖಿಕ ಆದೇಶದಂತೆ ಅವ್ಯಹಾರ ನಡೆದಿದೆ ಎಂದು ಚಂದ್ರಶೇಖರ್ ಅವರು ಬರೆದಿದ್ದಾರೆನ್ನಲಾಗಿದೆ.
ಪ್ರಕರಣದ ತನಿಖೆಯನ್ನು SIT ನಡೆಸುತ್ತಿದ್ದು, ಇತ್ತ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು CBI ಪ್ರಾದೇಶಿಕ ಕಚೇರಿಗೆ ದೂರು ನೀಡಿದ್ದಾರೆ.

