Spread the love

ಸಂಯುಕ್ತ ಟೈಮ್ಸ್, ಬೆಂಗಳೂರು: ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರೋಪದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಅವರನ್ನು ಜೂನ್‌ 9 ರಂದು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿದ ಬಳಿಕ ಆರೋಪಿಗಳು ಕಾಮಾಕ್ಷಿಪಾಳ್ಯ ರಿಂಗ್‌ ರೋಡ್‌ ಬಳಿ ಇರುವ  ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ ಮುಂದಿರುವ ಮೋರಿಯಲ್ಲಿ ಶವವನ್ನು ಎಸೆದಿದ್ದರು. ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಇತ್ಯಾದಿ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ  ಆರೋಪಿಗಳನ್ನು ಬಂಧಿಸಿದ್ದರು. ಬಂಧನ ಮಾಡಿದ ಆರೋಪಿಗಳ ವಿವರ ಕಲೆ ಹಾಕಿದಾಗ ಅವರು ದರ್ಶನ್‌ ಬಾಡಿಗಾರ್ಡ್‌ಗಳು ಎಂಬ ಶಾಕಿಂಗ್‌ ವಿಚಾರ ಗೊತ್ತಾಗಿದೆ.

ಆರೋಪಿಗಳನ್ನು ವಿಚಾರಣೆ ಒಳಪಡಿಸಿದಾಗ ಅವರು ದರ್ಶನ್‌ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆರ್‌ ಆರ್‌ ನಗರದಲ್ಲಿ ಕೊಲೆ ಮಾಡಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಕೊಲೆಗೆ ದರ್ಶನ್‌ ಸುಪಾರಿ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಆರೋಪ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್‌ ಅವರನ್ನು ಇಂದು ಬೆಳಗ್ಗೆ ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ  ನಡೆಸುತ್ತಿದ್ದಾರೆ.

ಅಶ್ಲೀಲ ಮೆಸೇಜ್‌ ಮಾಡಿದ್ದಕ್ಕೆ ಕೊಲೆ:
ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಮಾಡುತ್ತಿದ್ದರು. ಈ ಕಾರಣಕ್ಕೆ ದರ್ಶನ್‌ ಕಡೆಯವರು ರೇಣುಕಾಸ್ವಾಮಿಯ ಅವರನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

You missed

error: Content is protected !!