Spread the love

ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಾಲಾ ಸಂಸ್ಕೃತಿಯ ಪಾತ್ರ ಹಿರಿದು

ಒಂದು ಶಾಲೆಯ ಪಠ್ಯಕ್ರಮವು ವಿದ್ಯಾರ್ಥಿಗಳ ಕಲಿಕೆ ಯನ್ನು ರೂಪಿಸುವ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಕಲಿಕಾ ಗುರಿಗಳು, ಪಠ್ಯವಿಷಯ, ಪಠ್ಯ ಪುಸ್ತಕಗಳು, ಬೋಧನಾವಿಧಾನ, ಮೌಲ್ಯಮಾಪನ ಮಾತ್ರವಲ್ಲದೆ ಶಾಲೆಯ ಸಂಸ್ಕೃತಿ ಮತ್ತು ಕಾರ್ಯವಿಧಾನಗಳು ಸಹ ಪ್ರಮುಖವೆನಿಸುತ್ತವೆ. ಪಠ್ಯಕ್ರಮದ ಸಂಕುಚಿತ ದೃಷ್ಟಿಕೋನಗಳು ಹಲವು ಬಾರಿ ಅದರ ಗುರಿ ಮತ್ತು ಅಭ್ಯಾಸ ಕ್ರಮವನ್ನು ನಿರ್ಧರಿಸುತ್ತವೆ. ಶಿಕ್ಷಣದಲ್ಲಿ ಶಾಲಾ ಸಂಸ್ಕೃತಿ ಮತ್ತು ಕಾರ್ಯವಿಧಾನಗಳು ವಹಿಸುವ ಪ್ರಮುಖ ಪಾತ್ರವನ್ನು ಈ ಬಗೆಯ ದೃಷ್ಟಿಕೋನಗಳು ನಿರ್ಲಕ್ಷಿಸುತ್ತವೆ ಅಥವಾ ಈ ಕುರಿತು ಬೂಟಾಟಿಕೆಯ ಕಾಳಜಿಯನ್ನಷ್ಟೇ ತೋರುತ್ತವೆ.

ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು- 2023 (ಎನ್‌ಸಿಎಫ್‌), ಸಂಸ್ಕೃತಿ ಮತ್ತು ಕಾರ್ಯವಿಧಾನಗಳನ್ನು ಸದುದ್ದೇಶದ ಹೇಳಿಕೆಗಳಿಗಷ್ಟೇ ಸೀಮಿತಗೊಳಿಸದೆ, ಅವುಗಳಿಗೆ ಸಲ್ಲಬೇಕಾದ ಪ್ರಾಮುಖ್ಯವನ್ನು ನೀಡುತ್ತದೆ. ಉದ್ದೇಶ ಮತ್ತು ತತ್ವಗಳನ್ನು ನಡವಳಿಕೆ ಹಾಗೂ ಅಭ್ಯಾಸಗಳ ರೂಪದಲ್ಲಿ ಕಾರ್ಯರೂಪಕ್ಕೆ ಇಳಿಸುತ್ತದೆ. ವಿದ್ಯಾರ್ಥಿಗಳು ಸಂಸ್ಕೃತಿ ಅನುಭವವನ್ನು ಪಡೆಯುವ ರೀತಿ ಹೀಗೆಯೇ. ಉದಾಹರಣೆಗೆ, ಎಲ್ಲರನ್ನೂ ಗೌರವಿಸುವುದು, ಬಹುತ್ವ, ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆಂದು ಬರೀ ಬಾಯಿಮಾತಿನಲ್ಲಿ ಹೇಳು ಬದಲು, ದೈನಂದಿನ ಶಾಲಾ ಬದುಕಿನಲ್ಲಿ ಈ ಮೌಲ್ಯಗಳು ಅಭಿವ್ಯಕ್ತಗೊಳ್ಳುವಂತೆ ಮಾಡುವುದು ಹೇಗೆ ಎಂಬುದರ ಬಗ್ಗೆ ಇದು ಗಮನಹರಿಸುತ್ತದೆ. ಪ್ರಾಂಶುಪಾಲರು ಅಥವಾ ಶಿಕ್ಷಕರನ್ನು ಪೋಷಕರು ಭೇಟಿಯಾದಾಗ ಅವರನ್ನು ನಡೆಸಿಕೊಳ್ಳುವ ರೀತಿ, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ವರ್ತನೆ, ಇತರರಿಗೆ ನೆರವಾಗುವ ವಿದ್ಯಾರ್ಥಿಗಳ ಸದ್ಗುಣವನ್ನು ಗುರುತಿಸುವಂತಹ ಅನೇಕ ವಿಷಯಗಳು ಇದರ ವ್ಯಾಪ್ತಿಗೆ ಬರುತ್ತವೆ. ಶಾಲಾ ಸಂಸ್ಕೃತಿಯು ವಿದ್ಯಾರ್ಥಿಗಳ ಕಲಿಕೆಯಲ್ಲಿ ಎರಡು ರೀತಿಯ ಪಾತ್ರಗಳನ್ನು ವಹಿಸುತ್ತದೆ. ಕ್ರಿಯಾಶೀಲ, ಪ್ರೇರಣೆಯಾಗಬಲ್ಲ ವಿದ್ಯಾರ್ಥಿಗಳೊಂದಿಗೆ ಸೇರಿ ಪರಿಣಾಮಕಾರಿ ಕಲಿಕಾ ಪರಿಸರವನ್ನು ರೂಪಿಸುತ್ತದೆ ಹಾಗೂ ಮೌಲ್ಯಗಳನ್ನು ರೂಢಿಸಿಕೊಳ್ಳಲು ಅನುವಾಗಿಸುತ್ತದೆ.

Leave a Reply

Your email address will not be published. Required fields are marked *

You missed

error: Content is protected !!