ಸಂಯುಕ್ತ ಟೈಮ್ಸ್, ಬಾಗಲಕೋಟೆ: ಯುವತಿಯೊಬ್ಬಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನಿಗೆ ತಿಳುವಳಿಕೆ ಹೇಳಿದ್ದಕ್ಕೆ ಸಿಟ್ಟಿಗೆದ್ದು, ಯುವತಿಯ ತಂದೆಯನ್ನೇ ಕೊಚ್ಚಿ ಹತ್ಯೆಗೈದ ಘಟನೆ ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಸಂಗನಗೌಡ (52) ಎಂದು ಗುರುತಿಸಲಾಗಿದೆ. ಪ್ರವೀಣ್ ಕಾಂಬಳೆ ಹತ್ಯೆಗೈದ ಆರೋಪಿ. ಭಗವತಿ ಗ್ರಾಮದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಪ್ರವೀಣ್, ಹತ್ಯೆಯಾದ ಸಂಗನಗೌಡ ಎಂಬವರ ಮಗಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ವಿಷಯ ತಿಳಿದ ಸಂಗನಗೌಡ ಮಗಳ ಸಹವಾಸ ಬಿಡುವಂತೆ ಯುವಕನಿಗೆ ಥಳಿಸಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ತಿಳುವಳಿಕೆ ಹೇಳಿದ್ದರೂ ಆರೋಪಿ ತನ್ನ ಚಾಳಿಯನ್ನು ಮುಂದುವರಿಸಿದ್ದ. ಅಲ್ಲದೇ ಥಳಿಸಿದ ಸೇಡಿಗಾಗಿ, ಮಚ್ಚಿನಿಂದ ಸಂಗನಗೌಡನನ್ನು ಕೊಚ್ಚಿ ಕೊಲೆ ಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

